ಮಂಗಳೂರು: ಬಣ್ಣ ಬಣ್ಣದ, ಬಗೆಬಗೆ ಶೈಲಿಯ ಸೀರೆಯುಟ್ಟು ಉರ್ವ ಕೆನರಾ ಶಾಲೆಯ ಆವರಣಕ್ಕೆ ಬಂದ ಮಹಿಳೆಯರು ‘ಸಾರಿ ವಾಕ್’ ಮತ್ತು ‘ಸಾರಿ ರನ್’ನಲ್ಲಿ ಪಾಲ್ಗೊಂಡು ಖುಷಿಪಟ್ಟರು.
ನಗರದ ನಾರಿ ಕ್ಲಬ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ಓಟ ಮತ್ತು ನಡಿಗೆಗೆ ಮೊದಲು ಜುಂಬಾ ಡ್ಯಾನ್ಸ್‌ನಲ್ಲಿ ಪಾಲ್ಗೊಂಡ ಸ್ಪರ್ಧಾಳುಗಳು ಮೈಮನವನ್ನು ಹದಗೊಳಿಸಿದರು. ದಿವ್ಯಾ ಹೇಳಿಕೊಟ್ಟ ಹೆಜ್ಜೆಗಳನ್ನು ಉತ್ಸಾಹದಿಂದ ಅನುಕರಿಸಿದ ಅವರು ನಂತರ ಸ್ಪರ್ಧೆಯಲ್ಲೂ ಅದೇ ಲಯ ಕಾಯ್ದುಕೊಂಡರು.
ಮೈದಾನದಿಂದ ಹೊರಟು ಮಣ್ಣುಗುಡ್ಡ ಗುರ್ಜಿ, ದುರ್ಗಾ ಮಾಲ್, ಬಲ್ಲಾಳ್‌ಬಾಗ್ ವೃತ್ತದ ಮೂಲಕ ನಗರಪಾಲಿಕೆ ಕಚೇರಿ ಬದಿಯ ರಸ್ತೆ ಮೂಲಕ ಸಾಗಿ ಮೈದಾನಕ್ಕೆ ವಾಪಸ್ ಬಂದರು. ಹೃದಯ ದಿನದ ಅಂಗವಾಗಿ ಅವರ ಕೈಯಲ್ಲಿ ಬಲೂನ್‌ನಲ್ಲಿ ತಯಾರಿಸಿದ ಹೃದಯದ ಸಂಕೇತವಿತ್ತು.
ಓಟದಲ್ಲಿ ಯೆನೆಪೋಯ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಅನ್ನಪೂರ್ಣಾ ರಾವ್ ಪ್ರಥಮ, ಮಂಗಳೂರಿನ ಪ್ರಿಯಾಂಕಾ ದ್ವಿತೀಯ ಮತ್ತು ಬಂಟ್ವಾಳದ ರೋಹಿಣಿ ಬಿ ತೃತೀಯ ಸ್ಥಾನ ಗಳಿಸಿದರು. ಇವರು ಕ್ರಮವಾಗಿ ₹3500, ₹ 2500 ಮತ್ತು ₹1500 ಮೊತ್ತದ ಬಹುಮಾನ ನೀಡಲಾಯಿತು. ನಡಿಗೆಯಲ್ಲಿ ಸ್ಪರ್ಧೆ ಇರಲಿಲ್ಲ. ಓಟ ಹಾಗೂ ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರೂ ಪದಕ ಮತ್ತು ಪ್ರಮಾಣಪತ್ರ ಪಡೆದುಕೊಂಡರು.
ಸ್ಪ್ರಿಂಟರ್, ಭಾರತ ಮಹಿಳೆಯರ ರಿಲೆ ಮತ್ತು ಮಿಶ್ರ ರಿಲೆ ತಂಡದ ಸದಸ್ಯೆ ಎಂ.ಆರ್.ಪೂವಮ್ಮ ಸ್ಪರ್ಧೆಗೆ ಚಾಲನೆ ನೀಡಿದರು. ಪೂವಮ್ಮ ಮತ್ತು ಮೂವರು ಸಾಧಕಿಯರನ್ನು ಗೌರವಿಸಲಾಯಿತು. ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕಿ ರೇಣು ನಾಯರ್, ಎಜೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸ್ವಾತಿ, ಯೂನಿಯನ್ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ರಾಜಾಮಣಿ ಮತ್ತು ನಾರಿ ಕ್ಲಬ್‌ನ ರಾಜೇಶ್ ರಾಮಯ್ಯ ಇದ್ದರು.
ಹೆಚ್ಚು ಸ್ಪರ್ಧಿಗಳ ನೋಂದಣಿ ಮಾಡಿಸಿದ ಯೂನಿಯನ್ ಬ್ಯಾಂಕ್ ಮತ್ತು ಬ್ರಿಗೇಡ್ ಪಿನಾಕಲ್ ಅಪಾರ್ಟ್‌ಮೆಂಟ್‌ಗೆ ಬಹುಮಾನ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.