ADVERTISEMENT

ಸಮಾನ ಬದುಕು ನೀಡಲು ಯತ್ನ: ಲಾರೆನ್ಸ್ ಮುಕ್ಕುಯಿ

ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಬಿಷಪ್ ಲಾರೆನ್ಸ್ ಮುಕ್ಕುಯಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 5:06 IST
Last Updated 3 ಡಿಸೆಂಬರ್ 2021, 5:06 IST
ಸಾಂತೋಮ್ ಟವರ್ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಮಾತನಾಡಿದರು.
ಸಾಂತೋಮ್ ಟವರ್ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಮಾತನಾಡಿದರು.   

ಬೆಳ್ತಂಗಡಿ: ಎಚ್‌ಐವಿ ರೋಗ ಹರಡುವಿಕೆ ಇಳಿಕೆಯಾಗಿದೆ. ಇದರ ಬಗ್ಗೆ ಜನಜಾಗೃತಿ ಮೂಡಿದೆ. ಡಿಕೆಆರ್‌ಡಿಎಸ್ ಸಂಸ್ಥೆಯಿಂದ ಏಡ್ಸ್ ಬಾಧಿತರು ಮತ್ತು ಸೋಂಕಿತರಿಗೆ ಎಲ್ಲರಂತೆ ಸಮಾನ ಬದುಕು ಕಟ್ಟಿಕೊಡಲು ಪ್ರಯತ್ನಿಸಲಾಗುತ್ತಿದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಅವರ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಡಿಕೆಆರ್‌ಡಿಎಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.

ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ (ಡಿಕೆಆರ್‌ಡಿಎಸ್) ನೇತೃತ್ವದಲ್ಲಿ ಸ್ನೇಹ ಜ್ಯೋತಿ ಮಹಿಳಾ ತಾಲ್ಲೂಕು ಒಕ್ಕೂಟ, ನವಚೈತನ್ಯ ಸಂಘಗಳ ಆಶ್ರಯದಲ್ಲಿ ಈಚೆಗೆ ಇಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯಕ ಅಧಿಕಾರಿ ರತ್ನಾವತಿ ಮಾತನಾಡಿ, ‘ಏಡ್ಸ್ ಬಾಧಿಸಿದರೆ ಮೊದಲ‌ ಹಂತದಲ್ಲೇ ಅದನ್ನು ಪತ್ತೆಹಚ್ಚಿ ಅಂತಹವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಹಾಗೂ ರೋಗ ಬಾರದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಡಿಕೆಆರ್‌ಡಿಎಸ್ ಸಂಸ್ಥೆ ಮಾಡುತ್ತಿದೆ’ ಎಂದರು.

ADVERTISEMENT

ಏಡ್ಸ್ ಪೀಡಿತರಿಗೆ ಪೌಷ್ಟಿಕ ಅಹಾರವನ್ನು ಕುಟ್ರುಪಾಡಿ ಚರ್ಚ್‌ನ ಧರ್ಮಗುರು ಫಾ. ಜೋಸ್ ಅಯಾಂಗುಡಿ ವಿತರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶ್ರೀಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುರಳಿಕೃಷ್ಣ ಇರ್ವತ್ರಾಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ, ಏಡ್ಸ್ ರೋಗದ ಗುಣ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಿದರು.

ನವ ಚೈತನ್ಯ ಸಂಘದ ಅಧ್ಯಕ್ಷೆ ಲಲಿತಾ ಇದ್ದರು. ನಂದಾದೀಪ ತಂಡದವರು ಜಾಗೃತಿ ಗೀತೆ ಪ್ರಸ್ತುತಪಡಿಸಿದರು. 11 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನೆಲ್ಯಾಡಿ ಕುಟ್ರುಪ್ಪಾಡಿ ಸೇಂಟ್ ಮೇರಿಸ್ ಚರ್ಚ್‌ನ ಧರ್ಮಗುರು ಫಾದರ್ ಜೋಸ್ ಅಯಾಂಗುಡಿ ಅವರನ್ನು ಬಿಷಪ್ ಸನ್ಮಾನಿಸಿದರು.

ನಿರ್ದೇಶಕ ಫಾ. ಬಿನೋಯ್ ಎ.ಜೆ ಸ್ವಾಗತಿಸಿದರು. ಸಿಸಿಲಿಯಾ ಕಾರ್ಯಕ್ರಮ ನಿರೂಪಿಸಿದರು.

ಕಾರಿತಾಸ್ ಇಂಡಿಯಾ ಸಂಸ್ಥೆಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಿಸಲಾಯಿತು. ಮುಂಡಾಜೆ ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನೆ ಹಾಡಿದರು. ಸ್ನೇಹ ಜ್ಯೋತಿ ಮಹಿಳಾ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ
ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.