ADVERTISEMENT

ಮಂಗಳೂರು | ಬಿಲ್ಲವರ ಜಾಗತಿಕ ಕ್ರೀಡೋತ್ಸವ 18ರಂದು

ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 8:37 IST
Last Updated 16 ಜನವರಿ 2026, 8:37 IST
ಸುದ್ದಿಗೋಷ್ಠಿಯಲ್ಲಿ ನವೀನಚಂದ್ರ ಸುವರ್ಣ ಮಾತನಾಡಿದರು. ಸುಮಲತಾ ಎನ್. ಸುವರ್ಣ, ಸದಾನಂದ ಪೂಜಾರಿ, ಜಯಪ್ರಕಾಶ್, ಜೀವನ್ ಕುಮಾರ್ ಭಾಗವಹಿಸಿದ್ದರು 
ಸುದ್ದಿಗೋಷ್ಠಿಯಲ್ಲಿ ನವೀನಚಂದ್ರ ಸುವರ್ಣ ಮಾತನಾಡಿದರು. ಸುಮಲತಾ ಎನ್. ಸುವರ್ಣ, ಸದಾನಂದ ಪೂಜಾರಿ, ಜಯಪ್ರಕಾಶ್, ಜೀವನ್ ಕುಮಾರ್ ಭಾಗವಹಿಸಿದ್ದರು    

ಮಂಗಳೂರು:‌ ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಆಶ್ರಯದಲ್ಲಿ ಬಿಲ್ಲವರ ಜಾಗತಿಕ ಕ್ರೀಡೋತ್ಸವವು ನಗರದ ನೆಹರೂ ಮೈದಾನದಲ್ಲಿ ಇದೇ 18ರಂದು ನಡೆಯಲಿದೆ.

ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಅಖಿಲ ಭಾರತೀಯ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಸುವರ್ಣ, ‘ಬಿಲ್ಲವರ ಯುವ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಈ ಕ್ರೀಡೋತ್ಸವ  ಆಯೋಜಿಸಲಾಗಿದೆ. ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ, ಪುರುಷರಿಗೆ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸೇರಿದಂತೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಿಂಗಪುರ, ದುಬೈ, ಬಹರೇನ್‌ ಹಾಗೂ ಭಾರತದ ವಿವಿಧ ಕಡೆಯ 80 ತಂಡಗಳು ಭಾಗವಹಿಸಲಿದೆ’ ಎಂದರು.

18ರಂದು ಬೆಳಿಗ್ಗೆ 7.30ರಿಂದ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಿಂದ ನೆಹರೂ ಮೈದಾನದವರೆಗೆ ಮಹಿಳಾ ವಿಶ್ವಕಪ್ ಕಬಡ್ಡಿ ಟೂರ್ನಿ ವಿಜೇತ ಭಾರತೀಯ ತಂಡದ ಸದಸ್ಯೆ ಧನಲಕ್ಷ್ಮೀ ಪೂಜಾರಿ ನೇತೃತ್ವದಲ್ಲಿ ಕ್ರೀಡಾ ಜ್ಯೋತಿಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಾರಾಯಣ ಗುರು ವೃತ್ತ, ಮಹಾತ್ಮ ಗಾಂಧಿ ರಸ್ತೆ, ಕೆ.ಎಸ್. ರಾವ್ ರಸ್ತೆ ಮೂಲಕ ಸಾಗಲಿದೆ ಎಂದರು.

ADVERTISEMENT

ಉದ್ಯಮಿಗಳಾದ ಜಯರಾಮ್ ಬನಾನ್ ಹಾಗೂ ಎಲ್. ಸುಧಾಕರ ಪೂಜಾರಿ ಅಂದು ಬೆಳಿಗ್ಗೆ 9 ಗಂಟೆಗೆ ಈ ಕ್ರೀಡಾಕೂಟವನ್ನು ಉದ್ಘಾಟಿಸುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್‌, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ನಾರಾಯಣಗುರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಂಜುನಾಥ ಪೂಜಾರಿ, ನಂದನಬಿತ್ತಿಲ್‌ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಭಾಗವಹಿಸುವರು ಎಂದರು.

ಸಂಜೆ 6 ಗಂಟೆಗೆ ಸಮಾರೋಪ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸುವರು. ವಿಜೇತ ತಂಡಗಳಿಗೆ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಬಹುಮಾನ ವಿತರಿಸುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವಿ.ಸುನಿಲ್ ಕುಮಾರ್‌, ವೇದವ್ಯಾಸ ಕಾಮತ್‌, ಮಾಜಿ ಸಚಿವರಾದ ಜಯಮಾಲಾ, ಕುಮಾರ್ ಬಂಗಾರಪ್ಪ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್‌ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಸಂಚಾಲಕ ಸದಾನಂದ ಪೂಜಾರಿ, ಖಜಾಂಚಿ ಜಯಪ್ರಕಾಶ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ಭಾಗವಹಿಸಿದ್ದರು.

ಸಿಂಗಪುರ, ದುಬೈ, ಬಹರೇನ್‌ ಹಾಗೂ ಭಾರತದ ವಿವಿಧ ತಂಡಗಳು ಭಾಗಿ ಕಬಡ್ಡಿ ಪಟು ಧನಲಕ್ಷ್ಮೀ ಪೂಜಾರಿ ನೇತೃತ್ವದಲ್ಲಿ ಕ್ರೀಡಾಜ್ಯೋತಿ ಮೆರವಣಿಗೆ

ಕ್ರೀಡೋತ್ಸವಕ್ಕೆ ತಾರಾ ಮೆರುಗು  ಕ್ರೀಡೋತ್ಸವದಲ್ಲಿ ಸಿನಿಮಾ ನಟ ಶಿವರಾಜ್‌ಕುಮಾರ್ ವಿಜಯ ರಾಘವೇಂದ್ರ ಧನ್ಯಾ ರಾಮ್‌ಕುಮಾರ್ ಯುವ ರಾಜ್‌ಕುಮಾರ್ ಪೃಥ್ವಿ ಅಂಬರ್ ಹಾಗೂ ನಿರೂಪಕಿ ಅನುಶ್ರೀ ಶೆಟ್ಟಿ ಭಾಗವಹಿಸುವ ಮೂಲಕ ತಾರಾ ಮೆರುಗು ತುಂಬಲಿದ್ದಾರೆ. ಅಂದು ಸಂಜೆ 5.30ರಿಂದ ಪ್ರಕಾಶ್ ಮಹಾದೇವನ್ ತಂಡದಿಂದ ಸಂಗೀತ ರಸಮಂಜರಿ ಏರ್ಪಡಿಸಲಾಗಿದೆ ಎಂದು ನವೀನಚಂದ್ರ ಸುವರ್ಣ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.