ಉಜಿರೆ: ‘ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರದಿಂದ ಸುಖ, ಶಾಂತಿ, ನೆಮ್ಮದಿಯ ಆರೋಗ್ಯಪೂರ್ಣ ಜೀವನ ಸಾಧ್ಯವಿದೆ. ಅರಣ್ಯನೀತಿ ಬದಲಾಗಬೇಕು. ಶಿಕ್ಷಣದಲ್ಲಿ ಸಸ್ಯವೈವಿಧ್ಯ ಹಾಗೂ ಪಾರಂಪರಿಕ ಸಸ್ಯಗಳ ಬಗ್ಯೆ ಅರಿವು ಮೂಡಿಸುವ ಕೆಲಸವಾಗಬೇಕು. ಎಲ್ಲರೂ ದೃಢಸಂಕಲ್ಪದೊಂದಿಗೆ ಪರಿಶುದ್ಧ ಪರಿಸರ ಸಂರಕ್ಷಣೆಯ ರಾಯಭಾರಿಗಳಾಗಬೇಕು’ ಎಂದು ಪರಿಸರತಜ್ಞ ಶಿರಸಿಯ ಶಿವಾನಂದ ಕಳವೆ ಹೇಳಿದರು.
ಇಲ್ಲಿನ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಳ್ತಂಗಡಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
‘ನದಿಗಳು, ತೊರೆಗಳು ನೈಸರ್ಗಿಕವಾಗಿ ಸ್ವಚ್ಛತಾ ಕಾರ್ಯ ಮಾಡಿದರೆ, ಬಳಸಿ, ಬಿಸಾಡಿದ ತ್ಯಾಜ್ಯಗಳ ಮೂಲಕ ಮನುಷ್ಯರು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ, ಪಾರಂಪರಿಕ ಕೃಷಿ ಪದ್ಧತಿ ಮರೆತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಅತಿವೃಷ್ಟಿ-ಅನಾವೃಷ್ಟಿ, ಕೀಟನಾಶಕ ಬಳಕೆ ಇತ್ಯಾದಿ ಕಾರಣಗಳಿಂದ ಶುದ್ಧ ನೀರು, ಗಾಳಿ ಮತ್ತು ಪರಿಶುದ್ಧ ಆಹಾರ ಇಂದು ಸಿಗುತ್ತಿಲ್ಲ. ಮುಂದಿನ ಜನಾಂಗಕ್ಕೆ ಪರಿಶುದ್ಧ ಪರಿಸರ ರೂಪಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಎಚ್.ಲಕ್ಷ್ಮಿಕಾಂತ್ ಮಾತನಾಡಿ, ಮಣ್ಣು, ನೀರು ಮತ್ತು ಮರಗಳು ಸಕಲ ಜೀವಿಗಳ ಆರೋಗ್ಯಪೂರ್ಣ ಜೀವನಕ್ಕೆ ಅನಿವಾರ್ಯವಾಗಿವೆ. ಅನಿಯಮಿತ ಬೋರ್‌ವೆಲ್‌ಗಳ ಅಪಾಯಕಾರಿ ದುರಂತದಿಂದ ಕರಾವಳಿ ಕರಗುತ್ತಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ನದಿದಂಡೆಗಳು ಮತ್ತು ನದಿಪಾತ್ರಗಳು ಹಾಳಾಗುತ್ತಿವೆ. ಇವುಗಳನ್ನು ಸರ್ಕಾರವೇ ವಶಪಡಿಸಿಕೊಂಡು ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಅಶೋಕಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಶಾಲಾ-ಕಾಲೇಜುಗಳಲ್ಲಿ ವಿಚಾರಸಂಕಿರಣ, ಸ್ಪರ್ಧೆಗಳು ಹಾಗೂ ಗಿಡಗಳ ನಾಟಿ ಮೂಲಕ ಪರಿಸರ ಸಂರಕ್ಷಣೆ ಬಗ್ಯೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಿಗೆ 250 ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಪರಿಸರ ಜಾಥಾಕ್ಕೆ ಚಾಲನೆ ನೀಡಿದರು. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ. ಪ್ರಮೋದ್ ಕುಮಾರ್ ವಂದಿಸಿದರು. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.
‘ರೈತರಿಂದ ಸರಳ ತಂತ್ರಜ್ಞಾನ’:
ಹಿಂದೆ ಗದ್ದೆಗಳಲ್ಲಿ ಹಾಗೂ ತೋಟಗಳಲ್ಲಿ ಮಣ್ಣಿನ ಗೋಡೆ ಕಟ್ಟಿ ಹಸಿ ಸಗಣಿ ಮೆತ್ತಿ ಬಿಡುತ್ತಿದ್ದರು. ಬಳಿಕ ಮಳೆಗಾಲದಲ್ಲಿ ಅದರ ಮೇಲೆ ಹಾವಸೆ ಬೆಳೆದು ಆವರಿಸಿ ಅದು ಕಾಂಕ್ರೀಟ್ ಗೋಡೆಯಂತೆ ನೂರಾರು ವರ್ಷ ಬಳಕೆಯಾಗುತ್ತಿತ್ತು. ಇದು ರೈತರ ಸರಳ ತಂತ್ರಜ್ಞಾನವಾಗಿತ್ತು ಎಂದು ಶಿವಾನಂದ ಕಳವೆ ಹೇಳಿದರು. ಜನಸಂಖ್ಯೆ ಹೆಚ್ಚಳ ಪ್ರಕೃತಿ-ಪರಿಸರ ಮಾಲಿನ್ಯ ವಸತಿಸಮುಚ್ಚಯಗಳು ರಸ್ತೆಗಳ ವಿಸ್ತರಣೆ ವಾಣಿಜ್ಯ ಸಂರ್ಕಿರ್ಣಗಳಿಗಾಗಿ ಕೆರೆಗಳನ್ನು ಮುಚ್ಚುವುದು ಅರಣ್ಯನಾಶ ಗುಡ್ಡ-ಬೆಟ್ಟಗಳು ಮಾಯವಾಗಿ ಇತ್ಯಾದಿ ಹತ್ತು ಹಲವು ಕಾರಣಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.