ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಪುತ್ತೂರು: ರೈತರೇ ಹೆಚ್ಚಾಗಿ ಬದುಕುತ್ತಿರುವ ನಮ್ಮ ಊರನ್ನು (ಕೆಯ್ಯೂರು ಗ್ರಾಮವನ್ನು) ಕಾಡಾನೆಯಿಂದ ಪಾರು ಮಾಡಿ ಎಂದು ಸಾಹಿತಿ ನರೇಂದ್ರ ರೈ ದೇರ್ಲ ಅವರು, ಕಾಡಾನೆ ಉಪಟಳಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಲಗತ್ತಿಸಿ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
ರೈತರೇ ಇರುವ ಈ ಊರಲ್ಲಿ ಹಲವು ದಿನಗಳಿಂದ ಕಾಡಾನೆಯೊಂದು ತೊಂದರೆ ಕೊಡುತ್ತಿದೆ. ನಮ್ಮ ಪಕ್ಕದ ಕೊಳ್ತಿಗೆ ಊರಲ್ಲಿ ಇತ್ತೀಚೆಗೆ ಇದೇ ಆನೆ ಮಹಿಳೆಯನ್ನು ಕೊಂದು ಹಾಕಿದೆ. ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಈ ಆನೆಯನ್ನು ಸ್ಥಳಾಂತರಿಸುವ ಭರವಸೆಯನ್ನು ನೀಡಿದ್ದರೂ, ಅದು ಇದುವರೆಗೆ ಈಡೇರಲಿಲ್ಲ. ಗುರುವಾರ ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಇಡೀ ಊರನ್ನು ತಲ್ಲಣ ಗೊಳಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸಿ ಅರಣ್ಯಾಧಿಕಾರಿ ಪ್ರತಿಬಾರಿಯೂ ಬಂದು ನಮ್ಮ ಜತೆಗೆ ಸಹಕರಿಸುತ್ತಾರೆ. ಆದರೆ, ಪದೇ ಪದೇ ಬರುತ್ತಿರುವುದರಿಂದ ಕಾಡಾನೆಯಿಂದಾಗಿ ಅವರ ಶ್ರಮ ವ್ಯಯವಾಗುತ್ತಿದ್ದು, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.
ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರವಾಸದಲ್ಲಿರುವ ಸಚಿವರು ಸೋಮವಾರ ಬೆಂಗಳೂರಿಗೆ ಬಂದ ಬಳಿಕ ಮನವಿಯನ್ನು ಅವರ ಗಮನಕ್ಕೆ ತರಲಾಗುವುದು ಎಂದು ಅರಣ್ಯ ಸಚಿವರ ಮಾಧ್ಯಮ ಕಾರ್ಯದರ್ಶಿ ಟಿ.ಎಂ.ಸತೀಶ್ ಅವರು ಸಂದೇಶದ ಮೂಲಕ ನರೇಂದ್ರ ರೈ ದೇರ್ಲ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.