ADVERTISEMENT

ಯಕ್ಷಗಾನ ಕಲಾವಿದರ ತ್ಯಾಗ ಅಲ್ಲಗಳೆಯದಿರಿ: ಸಾಹಿತಿ ನಾ.ದಾಮೋದರ

ಕುಂಬ್ಳೆ ಸುಂದರ ರಾವ್‌ ಸಂಸ್ಕರಣೆ ಕಾರ್ಯಕ್ರಮದಲ್ಲಿ ನಾ.ದಾ.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:26 IST
Last Updated 24 ನವೆಂಬರ್ 2025, 4:26 IST
ಮಂಗಳೂರಿನಲ್ಲಿ  ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತೆಂಕು ತಿಟ್ಟಿನ ಹೆಸರಾಂತ ಭಾಗವತ ರಘುರಾಮ ಹೊಳ್ಳ ಅವರಿಗೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಗೋಪಾಲಕೃಷ್ಣ ಶೆಟ್ಟಿ, ನಾ.ದಾ.ಶೆಟ್ಟಿ, ಪ್ರಭಾಕರ ಜೋಶಿ, ಕುಂಬಳೆ ಸುಂದರ ರಾವ್‌ ಅವರ ಪತ್ನಿ ಸುಶೀಲಾ ಹಾಗೂ ಕುಟುಂಬದವರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ  ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತೆಂಕು ತಿಟ್ಟಿನ ಹೆಸರಾಂತ ಭಾಗವತ ರಘುರಾಮ ಹೊಳ್ಳ ಅವರಿಗೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಗೋಪಾಲಕೃಷ್ಣ ಶೆಟ್ಟಿ, ನಾ.ದಾ.ಶೆಟ್ಟಿ, ಪ್ರಭಾಕರ ಜೋಶಿ, ಕುಂಬಳೆ ಸುಂದರ ರಾವ್‌ ಅವರ ಪತ್ನಿ ಸುಶೀಲಾ ಹಾಗೂ ಕುಟುಂಬದವರು ಭಾಗವಹಿಸಿದ್ದರು ಪ್ರಜಾವಾಣಿ ಚಿತ್ರ   

ಮಂಗಳೂರು: 'ಯಕ್ಷಗಾನ ಕಲಾವಿದರು ರಾತ್ರಿ- ಹಗಲು ಕಷ್ಟಪಟ್ಟು ಪುರಾಣದ ಹಾಗೂ ಚರಿತ್ರೆಯ ವಿಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ. ಅವರ ತ್ಯಾಗವನ್ನು ಯಾರೂ ಅಲ್ಲಗಳೆಯಲಾಗದು. ಅವರ ತ್ಯಾಗಕ್ಕೆ ಮಹತ್ವ ಹಾಗೂ ಬೆಲೆ ಕೊಡೋಣ’ ಎಂದು ಸಾಹಿತಿ ನಾ.ದಾಮೋದರ ಶೆಟ್ಟಿ ಹೇಳಿದರು.

ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ‘ಕೀರ್ತಿಶೇಷ ಕುಂಬ್ಳೆ ಸುಂದರ ರಾವ್‌ ಸಂಸ್ಮರಣ ಸಮಿತಿ’ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

‘ಯಕ್ಷಗಾನ ಕಲಾವಿದರ ಕುರಿತು ಇತ್ತೀಚೆಗೆ ಆಕ್ಷೇಪಾರ್ಹ ಮಾತುಗಳು ವ್ಯಕ್ತವಾಗಿವೆ. ಅದನ್ನು ಕೇಳಿದಾಗ ಮನಸ್ಸಿಗೆ ಬೇಸರವಾಗುತ್ತದೆ. ಅವು ಮಾತಿನ ಓಘದಲ್ಲಿ ಬಂದ ಮಾತುಗಳಲ್ಲ. ಅದರ ಹಿಂದೆ ಇನ್ನೇನೋ ಕಾರಣಗಳಿರಬಹುದು‘ ಎಂದರು.

ADVERTISEMENT

‘ಒಬ್ಬರೋ, ಇಬ್ಬರೋ ಕಲಾವಿದರಲ್ಲಿ ಸಣ್ಣ ಪುಟ್ಟ ಲೋಪದೋಷಗಳಿರಬಹುದು. ಅದನ್ನು ಯಕ್ಷಗಾನದ ಅಷ್ಟೂ ಕಲಾವಿದರ ಮೇಲೆ ಹಾಕುವುದು ಅಷ್ಟು ಒಳ್ಳೆಯ ಬೆಳವಣಿಗೆ ಅಲ್ಲ. ಯಕ್ಷಗಾನಕ್ಕೆ ವಿಶೇಷವಾದ ಗೌರವ ಇದೆ. ಆ ಗೌರವವನ್ನು ಉಳಿಸಲು ಯಾರೂ ಅಡ್ಡಿಪಡಿಸುವುದು ಬೇಡ. ಪುರಸ್ಕರಿಸುವುದಕ್ಕೆ ಸಾಧ್ಯವಾದಷ್ಟು ದೇಣಿಗೆ ನೀಡೋಣ’ ಎಂದರು.

ವಿದ್ವಾಂಸ ಪ್ರಭಾಕರ ಜೋಶಿ, ‘ನೇಕಾರರ ಕುಟುಂಬದ ಕುಂಬ್ಳೆ ಸುಂದರ ರಾವ್‌ ಅವರಿಗೆ ಮಗ್ಗ ಒಲಿಯಲಿಲ್ಲ. ಆದರೆ ಯಕ್ಷಗಾನ ಒಲಿಯಿತು. ಯಕ್ಷಗಾನ ಕಲಾವಿದನೊಬ್ಬ ಜನರಿಂದ ಚುನಾಯಿತರಾಗಿ ಶಾಸಕರಾಗಿದ್ದು ಇದ್ದರೆ, ಅದು  ಕುಂಬಳೆ ಮಾತ್ರ.  ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ದೊಡ್ಡ ಕಲಾವಿದ’ ಎಂದು ಹೇಳಿದರು.

ತೆಂಕುತಿಟ್ಟಿನ ಹೆಸರಾಂತ ಭಾಗವತ ರಘುರಾಮ ಹೊಳ್ಳ ಅವರಿಗೆ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಬಸ್‌ ಉದ್ಯಮಿ ಜಯಶೀಲ ಅಡ್ಯಂತಾಯ, ನಾಟಕಕಾರ ನವೀನ್ ಶೆಟ್ಟಿ ಭಾಗವಹಿಸಿದ್ದರು. ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಶಶಿರಾಜ್‌ ಕಾವೂರು ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಅಂಗವಾಗಿ ‘ಅಂಗದ ಸಂಧಾನ' ಯಕ್ಷಗಾನ ತಾಳಮದ್ದಳೆ ನಡೆಯಿತು.  ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಖ್ಯಾತ್ ಶೆಟ್ಟಿ ಮತ್ತು ಚೆಂಡೆ ಮದ್ದಳೆಯಲ್ಲಿ ಸತ್ಯಜಿತ್ ರಾಯಿ, ಸಮರ್ಥ್ ಉಡುಪ, ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಸದಾಶಿವ ಆಳ್ವ ಭಾಗವಹಿಸಿದರು. 

‘ಕುಂಬ್ಳೆ ಸುಂದರ ರಾವ್‌ ಪೋರ್ಟಲ್‌ ಆರಂಭಿಸಿ’

‘ಕುಂಬ್ಳೆ ಸುಂದರ ರಾವ್‌ ಕುರಿತ ಪೋರ್ಟಲ್ ರೂಪಿಸಿ ಅವರ ಯಕ್ಷಗಾನದ ಪಾತ್ರಗಳು ತಾಳಮದ್ದಲೆಯ ಮಾತುಗಾರಿಕೆ ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣ ಮತ್ತು ಇತರ ಭಾಷಣಗಳನ್ನು ಪ್ರಸಾರ ಮಾಡಬಹುದು. ಅವರ ಸ್ಮರಣಾರ್ಥ ಯಕ್ಷಗಾನವನ್ನು ಕಾರ್ಯಕ್ರಮವನ್ನು ಅಚ್ಚುಟ್ಟಾಗಿ ಸಂಘಟಿಸುವ ಕುರಿತ  ಕಮ್ಮಟ ಹಮ್ಮಿಕೊಳ್ಳಬಹುದು. ಕೋರ್ಸ್ ಆರಂಭಿಸಬಹುದು’ ಎಂದು ಪ್ರಭಾಕರ ಜೋಶಿ ಸಲಹೆ ನೀಡಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.