ADVERTISEMENT

ಪದ್ಯಾಣ ಶಂಕರನಾರಾಯಣ ಭಟ್‌ಗೆ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:22 IST
Last Updated 19 ನವೆಂಬರ್ 2025, 6:22 IST
<div class="paragraphs"><p>ಶಂಕರ ನಾರಾಯಣ ಭಟ್</p></div>

ಶಂಕರ ನಾರಾಯಣ ಭಟ್

   

ಮೂಡುಬಿದಿರೆ: ಯಕ್ಷಗಾನದ ಹಿರಿಯ ಮದ್ದಳೆವಾದಕ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು 2025ನೇ ಸಾಲಿನ ‘ಶ್ರೀಹರಿಲೀಲಾ ಯಕ್ಷನಾದ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.

ಯಕ್ಷಗಾನದ ಗುರು ದಂಪತಿ ಲೀಲಾವತಿ ಬೈಪಾಡಿತ್ತಾಯ ಮತ್ತು ಹರಿನಾರಾಯಣ ಬೈಪಾಡಿತ್ತಾಯ ಅವರ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಷನ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಡಿಜಿ ಯಕ್ಷಗಾನ ಫೌಂಡೇಷನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರಶಸ್ತಿ ಪ್ರದಾನ ಸಮಾರಂಭವು ಡಿ.9ರಂದು ಅಲಂಗಾರು ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಲಿದ್ದು, ಯಕ್ಷಗಾನದ ಪ್ರಥಮ ಭಾಗವತೆ ದಿ.ಲೀಲಾವತಿ ಬೈಪಾಡಿತ್ತಾಯ ಅವರ ಪ್ರಥಮ ವರ್ಷದ ಸಂಸ್ಮರಣೆಯೂ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ಜತೆಗೆ ವಿವಿಧ ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಅಂದು ಬೆಳಿಗ್ಗೆ ಬೈಪಾಡಿತ್ತಾಯರ ಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಯಕ್ಷಗಾನಾರ್ಚನೆ ನಡೆಯಲಿದೆ. ಮಧ್ಯಾಹ್ನ 3.15ರಿಂದ ಬೈಪಾಡಿತ್ತಾಯ ಶಿಷ್ಯವೃಂದದಿಂದ ಚೆಂಡೆಗಳ ಜುಗಲ್ಬಂದಿ ‘ಅಬ್ಬರತಾಳ’, ಸಂಜೆ ಲೀಲಾ ಬೈಪಾಡಿತ್ತಾಯರಿಗೆ ಗೌರವ ಸಲ್ಲಿಸುವ ಸಂಬಂಧ ಮಹಿಳೆಯರೇ ಇರುವ ಶ್ರೀಶ ಕಲಿಕಾ ಕೇಂದ್ರ ತಲಕಳದ ಕಲಾವಿದರಿಂದ ‘ದಕ್ಷ ಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಯಕ್ಷಗಾನ ವಿದ್ವಾಂಸ ಎಂ.ಪ್ರಭಾಕರ ಜೋಶಿ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಲಂಗಾರು ದೇವಸ್ಥಾನದ ಪ್ರಧಾನ ಆರ್ಚಕ ಈಶ್ವರ ಭಟ್ ಅವರು ದೀಪಪ್ರಜ್ವಲನೆ ಮಾಡುವರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅವರು ಲೀಲಾ ಬೈಪಾಡಿತ್ತಾಯರ ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಕಲಾವಿದ ವಾಸುದೇವ ರಂಗಾಭಟ್ ಮಧೂರು ಅವರು ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಅಭಿನಂದಿಸಲಿದ್ದಾರೆ. ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.