
ಮೂಲ್ಕಿ: ನ.16ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಯ ಏಳನೇ ಮೇಳದ ಪದಾರ್ಪಣೆ ಹಾಗೂ ಎಲ್ಲ ಮೇಳಗಳ ತಿರುಗಾಟದ ಆರಂಭದ ಸಂಭ್ರಮದ ಅಂಗವಾಗಿ ನ.15ರಂದು ಬಜಪೆಯಿಂದ ಕಟೀಲು ವರೆಗೆ ನಡೆಯಲಿರುವ ಮೇಳಗಳ ದೇವರು, ಪರಿಕರಗಳ ಮೆರವಣಿಗೆಯ ಸಿದ್ದತಾ ಸಭೆ ನಡೆಯಿತು.
ಕಟೀಲು ದೇಗುಲದ ಅರ್ಚಕ ಅನಂತ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಶ್ರೀಹರಿ ನಾರಾಯಣದಾಸ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಐಕಳ ಗಣೇಶ ಶೆಟ್ಟಿ, ಯಕ್ಷಧರ್ಮ ಬೋಧಿನಿ ಟ್ರಸ್ಟ್‌ನ ರಾಘವೇಂದ್ರ ಆಚಾರ್ಯ, ರವಿರಾಜ ಆಚಾರ್ಯ, ಯಾದವ ಕೋಟ್ಯಾನ್, ಶೇಖರ ಶೆಟ್ಟಿ ಪೆರ್ಮುದೆ, ಲೋಕೇಶ್ ಪೂಜಾರಿ ಬಜಪೆ, ರತ್ನಾಕರ ಶೆಟ್ಟಿ ಎಕ್ಕಾರು, ಈಶ್ವರ ಕಟೀಲು, ಅದ್ಯಪಾಡಿ ಹರೀಶ್ ಶೆಟ್ಟಿ, ವರಪ್ರಸಾದ ಶೆಟ್ಟಿ, ಜಯಂತ ಸುವರ್ಣ, ಭುಜಂಗ ಕುಲಾಲ್ ಪಾಲ್ಗೊಂಡಿದ್ದರು.
ಮೆರವಣಿಗೆ ಅದ್ದೂರಿಯಾಗಿ ನಡೆಯಬೇಕು. ಅಲ್ಲಲ್ಲಿ ದ್ವಾರಗಳನ್ನು ನಿರ್ಮಿಸಬೇಕು, ಬಜಪೆಯಿಂದ ಕಟೀಲು ವರೆಗೆ ಬಂಟಿಂಗ್ಸ್‌ನ ಅಲಂಕಾರ ಮಾಡಬೇಕು, ಮೂರು ಗಂಟೆಗೆ ಮೆರವಣಿಗೆ ಹೊರಟು ಎಕ್ಕಾರಿನಿಂದ ಐದು ಗಂಟೆಗೆ ಕಾಲ್ನಡಿಗೆ ಮೂಲಕ ಕಟೀಲು ತಲುಪಬೇಕು. ಎಕ್ಕಾರಿನಲ್ಲಿ ಪಾನೀಯ, ಕಟೀಲು ಬಸ್ ನಿಲ್ದಾಣದಲ್ಲಿ ಫಲಾಹಾರದ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು.ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಈಗಾಗಲೇ ಅನೇಕ ತಂಡಗಳು ಸ್ವಯಂ ಪ್ರೇರಣೆಯಿಂದ ನೋಂದಾಯಿಸಿದ್ದು 400ಕ್ಕೂ ಹೆಚ್ಚು ಮಂದಿ ಕುಣಿತ ಭಜನೆಯಲ್ಲಿ ಭಾಗವಹಿಸಲಿದ್ದಾರೆ. ನೂರಕ್ಕೂ ಹೆಚ್ಚು ಚೆಂಡೆ, ಕೊಂಬು, ಡೋಲುಗಳು ಮೆರವಣಿಗೆಯಲ್ಲಿ ಇರಲಿವೆ. ಮೇಳಗಳ ದೇವರ ಏಳು ಸ್ತಬ್ಧಚಿತ್ರಗಳನ್ನು ಭಕ್ತರು ಈಗಾಗಲೇ ಸೇವಾರೂಪದಲ್ಲಿ ವ್ಯವಸ್ಥೆಗೊಳಿಸಿದ್ದಾರೆ. ಏಳನೇ ಮೇಳಕ್ಕೆ ಬೇಕಾದ ದೇವರ ಕಿರೀಟ, ಬಂಗಾರ, ಬೆಳ್ಳಿಯ ಪರಿಕರಗಳನ್ನು ಸೇವಾದಾರರು ಒದಗಿಸಿಕೊಟ್ಟಿದ್ದಾರೆ. ಡಿಜೆ ಹಾಗೂ ನಾಸಿಕ್ ಬ್ಯಾಂಡ್‌ಗಳಿಗೆ ಅವಕಾಶ ಕೊಟ್ಟಿಲ್ಲ ಎಂದು ತಿಳಿಸಿದರು. ಹೊಸ ಮೇಳದ ಪ್ರಚಾರದ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.