ಸಂಸ್ಮರಣಾ ಕಾರ್ಯಕ್ರಮವನ್ನು ಎಂ.ಪ್ರಭಾಕರ ಜೋಶಿ ಉದ್ಘಾಟಿಸಿದರು.
ಪ್ರಜಾವಾಣಿ ಚಿತ್ರ
ಮಂಗಳೂರು: ಕೇವಲ ಮಹಿಳಾ ಕಲಾವಿದೆಯಾಗಿ ಮಾತ್ರವಲ್ಲ, ಭಾಗವತಿಕೆ ವಲಯದಲ್ಲೇ ಪ್ರಥಮರ ಸಾಲಿನಲ್ಲಿ ನಿಲ್ಲುವ ಲೀಲಾವತಿ ಬೈಪಾಡಿತ್ತಾಯ ಅವರ ಯಕ್ಷಗಾನ ಪ್ರಾವೀಣ್ಯವು ‘ಲೀಲಾವತಿ ಪ್ರಜ್ಞೆ’ಯಾಗಿ ಕಲಾಕ್ಷೇತ್ರದಲ್ಲಿ ಪುನುರತ್ಥಾನಗೊಳ್ಳಬೇಕು ಎಂದು ಯಕ್ಷಗಾನ ತಜ್ಞ ಪ್ರಭಾಕರ ಜೋಶಿ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕಾಟಿಪಳ್ಳದ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಭಾನುವಾರ ಆಯೋಜಿಸಿದ್ದ ವೃತ್ತಿಪರ ಯಕ್ಷಗಾನ ಮೇಳದ ಪ್ರಥಮ ಮಹಿಳಾ ಭಾಗವತರಾಗಿದ್ದ ಲೀಲಾವತಿ ಬೈಪಾಡಿತ್ತಾಯ ಅವರ ಸಂಸ್ಮರಣಾ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ಯಕ್ಷಗಾನದಲ್ಲಿ ಮಹಿಳೆಯರ ಚಾಪು ಮೂಡಿ ವರ್ಷಗಳು ಅನೇಕ ಆಗಿವೆ. ಆದರೆ ಪೂರ್ಣಾವಧಿ ಕಲಾವಿದೆಯಾಗಿ, ವೃತ್ತಿಪರತೆಯನ್ನು ಮೂಡಿಸಿದ ಮೊದಲಿಗರು ಲೀಲಾವತಿ. ಅವರಿಗೆ ಆರಂಭದಲ್ಲಿ ಆರ್ಥಿಕ ಬಡತನ ಇದ್ದರೂ ಕಲಾಶ್ರೀಮಂತಿಕೆ ಇತ್ತು. ರಾಗ, ಲಯ, ತಾಳ, ಕಾಲಪ್ರಭೇದ ಅರಿತು ಭಾಗವತಿಕೆ ಮಾಡಿ ಅವರು ಯಕ್ಷಗಾನದ ಗುರುವಾಗಿಯೂ ಹೆಸರು ಮಾಡಿದ್ದಾರೆ. ನಿಷ್ಕಲ್ಮಶ, ಗಂಭೀರ ವ್ಯಕ್ತಿತ್ವ ಹೊಂದಿದ್ದ ಅವರಲ್ಲಿ ಹಾಸ್ಯಪ್ರಜ್ಞೆಯೂ ಇತ್ತು ಎಂದು ಅವರು ಹೇಳಿದರು.
ಲೀಲಾವತಿ ಅವರು ಹಿಮ್ಮೇಳವನ್ನು ಮುನ್ನಡೆಸುತ್ತಿದ್ದರೂ ಮುಮ್ಮೇಳದವರಿಗೂ ಸ್ಪಂದಿಸುತ್ತಿದ್ದರು. ಅದರಿಂದ ವೇದಿಕೆ ಸಕ್ರಿಯವಾಗಿರುತ್ತಿತ್ತು. ಇಂಥ ಗುಣಗಳಿಂದ ಅವರು ಯಕ್ಷಗಾನದಲ್ಲಿ ಹೊಸ ವ್ಯಕ್ತಿತ್ವ ಬೆಳೆಸಿದರು, ಹೊಸ ಬೆಳಕು ಚೆಲ್ಲಿದರು. ಸಮತೋಲನವನ್ನೂ ತಂದಿದ್ದರು ಎಂದು ಜೋಶಿ ನುಡಿದರು.
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಪೂರ್ಣಿಮಾ ಯತೀಶ್ ರೈ ನೇತೃತ್ವದಲ್ಲಿ ಮಹಿಳೆಯರಿಂದ ತುಳು ಯಕ್ಷಗಾನ ಪ್ರದರ್ಶನ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರೈ, ಕಾಂಗ್ರೆಸ್ ಮುಖಂಡ ಶಶಿಧರ ಹೆಗ್ಡೆ, ಗಾಯಕ ನಾದಾ ಮಣಿನಾಲ್ಕೂರು, ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವಿನಾಶ್ ಬೈಪಾಡಿತ್ತಾಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.