ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಷೇಪಾರ್ಹ ವಿಡಿಯೊ ಅಪ್‌ಲೋಡ್: 17 ವರ್ಷದ ಯುವಕ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 10:26 IST
Last Updated 25 ಫೆಬ್ರುವರಿ 2022, 10:26 IST
   

ಮಂಗಳೂರು: 'ಟ್ರೋಲ್ ಕಿಂಗ್ 193’ ಇನ್‌ಸ್ಟ್ರಾಗ್ರಾಂ ಪೇಜ್ ಮೂಲಕ ಧಾರ್ಮಿಕ ಕೇಂದ್ರಗಳ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿರುವ ಪೇಜ್‌ನ ಅಡ್ಮಿನ್, ಅಪ್ರಾಪ್ತ ವಯಸ್ಸಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಶುಕ್ರವಾರ ಈ ವಿಷಯ ತಿಳಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ತನ್ನ ಇನ್‌ಸ್ಟ್ರಾಗ್ರಾಂ ಪೇಜ್‌ನ ಮೂಲಕ 17 ವರ್ಷದ ಯುವಕ ಎಡಿಟ್ ಮಾಡಿದ ವಿಡಿಯೊಗಳನ್ನು ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆತನನ್ನು ಬಾಲ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ ಎಂದರು.

ತಮ್ಮ ಸ್ನೇಹಿತರೊಂದಿಗೆ ಇನ್‌ಸ್ಟ್ರಾಗ್ರಾಂ ಪೇಜ್ ನೋಡುತ್ತಿದ್ದಾಗ ‘ಟ್ರೋಲ್ ಕಿಂಗ್ 193’ ಖಾತೆಯಲ್ಲಿ ಹಿಂದೂ ದೇವಾಲಯದ ಗೋಪುರದ ಮೇಲೆ ಹಸಿರು ಬಾವುಟ ಹಾರಾಟ ಮಾಡಿರುವ ಎಡಿಟ್ ಮಾಡಿದ ವಿಡಿಯೊ ಹಾಕಿರುವುದು ಕಂಡಿದ್ದು, ಈ ಬಗ್ಗೆ ಮನಸ್ಸಿಗೆ ನೋವಾಗಿರುವುದಾಗಿ ಮಂಗಳೂರಿನ ನಿವಾಸಿಯೊಬ್ಬರು ದೂರು ನೀಡಿದ್ದರು.

ADVERTISEMENT

ಅದರಂತೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತಂಡ ಪರಿಶೀಲನೆ ನಡೆಸಿದಾಗ ಈ ಪೇಜ್ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ಆಗಿರುವ ಈ ಯುವಕ ಮಂಗಳೂರು ಕೊಣಾಜೆ ನಿವಾಸಿಯಾಗಿದ್ದು, ಸದ್ಯ ಬೆಂಗಳೂರಿನಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಆತನಿಗೆ ಯಾರಿಂದಲಾದರೂ ಬೆಂಬಲವಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿಚಾರಣೆಯ ವೇಳೆ ಈತ ಈ ಪೇಜ್‌ನಲ್ಲಿ ತಾನೇ ಈ ಪೋಸ್ಟ್‌ಗಳನ್ನು ಹಾಕಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.