ADVERTISEMENT

ಯುವಕ ಆತ್ಮಹತ್ಯೆ: ಬಂಧನಕ್ಕೆ ಗಡುವು, ಪ್ರತಿಭಟನೆಯ ಎಚ್ಚರಿಕೆ

ನಾಲ್ವರ ವಿರುದ್ಧ ಎಸ್‌ಪಿ, ಪೊಲೀಸ್ ಠಾಣೆಗೆ ದೂರು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 7:05 IST
Last Updated 5 ನವೆಂಬರ್ 2022, 7:05 IST

ಬೆಳ್ತಂಗಡಿ: 'ತೋಟತ್ತಾಡಿ ನೆಲ್ಲಿಗುಡ್ಡೆ ನಿವಾಸಿ ಆನಂದ ಪೂಜಾರಿಯವರ ಮಗ ಚಂದ್ರಶೇಖರ ಎಂಬುವರು ಹಣಕಾಸಿನ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಸ್ಥಳೀಯರಾದ ನಾಲ್ವರು ಕಾರಣ. ಅವರನ್ನು ಕೂಡಲೇ ಬಂಧಿಸಬೇಕು’ ಎಂದು ವಕೀಲ ಮನೋಹರ್ ಕುಮಾರ್ ಆಗ್ರಹಿಸಿದರು.

ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ‘ನಾಲ್ವರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡರೂ ಬಂಧಿಸಿಲ್ಲ. ಬಂಧನಕ್ಕೆ 3 ದಿನ ಗಡುವು ನೀಡುತ್ತಿದ್ದು ಕ್ರಮ ಕೈಗೊಳ್ಳದೇ ಇದ್ದರೆ ಇದೇ 7ರಂದು ಧರ್ಮಸ್ಥಳ ಠಾಣೆ ಎದುರು ಊರವರು ಹಾಗೂ ಪೋಷಕರು ಪ್ರತಿಭಟಣೆ ನಡೆಸಲಿದ್ದಾರೆ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

'ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚಂದ್ರಶೇಖರ ಸೇರಿದಂತೆ 8 ಮಂದಿ ಶಬರಿ ಸ್ವಸಹಾಯ ಸಂಘದಲ್ಲಿದ್ದಾರೆ. ಚಂದ್ರಶೇಖರ ಹೆಸರಿನಲ್ಲಿ ಉಜಿರೆ ವಿಶ್ವಕರ್ಮ ಬ್ಯಾಂಕ್‌ನಿಂದ ಯೋಗೀಶ್ ಎಂಬಾತ₹ 4 ಲಕ್ಷ ಸಾಲ ಪಡೆದಿದ್ದು ಅದನ್ನು ಚಂದ್ರಶೇಖರ್ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದ್ದ. ಆತನಿಗೆ ಸಚಿನ್, ನಾರಾಯಣ ಮತ್ತು ಸುದರ್ಶನ್ ಸಹಕಾರ ನಿಡಿದ್ದಾರೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದರು.

ADVERTISEMENT

ಚಂದ್ರಶೇಖರ ತಂದೆ ಆನಂದ ಪೂಜಾರಿ ಮಾತನಾಡಿ, 'ನನ್ನ ಮಗ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ. ಆತನನ್ನು ಉಳಿಸಿಕೊಳ್ಳಲು ಒಂದು ತಿಂಗಳು ಚಿಕಿತ್ಸೆ ನೀಡಲಾಗಿತ್ತು. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು ನಮಗೆ ನ್ಯಾಯ ಸಿಗದಿದ್ದಲ್ಲಿ ಪೊಲೀಸ್ ಠಾಣೆಯೆದುರು ಧರಣಿ ಕುಳಿತುಕೊಳ್ಳಲಾಗುವುದು' ಎಂದರು.

ಸನತ್ ಕೋಟ್ಯಾನ್ ಮಾತನಾಡಿ 'ಪ್ರತಿಭಟನೆಗೆ ಬೆಂಬಲ ನೀಡುವಂತೆ ಮಾಜಿ ಶಾಸಕ ಕೆ.ವಸಂತ ಬಂಗೇರ, ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಘಟಕ ಬೆಳ್ತಂಗಡಿ ಹಾಗೂ ಸಮಾನ ಮನಸ್ಕರಲ್ಲಿ ಮನವಿ ಮಾಡಲಾಗಿದೆ' ಎಂದರು.

ಮೃತನ ತಾಯಿ ಪುಷ್ಪ, ಸಹೋದರ ವಿನಯಕುಮಾರ್, ಸ್ಥಳೀಯರಾದ ರಾಜನ್, ಮಂಜುನಾಥ್ಪತ್ರಿಕಾಗೊಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.