ADVERTISEMENT

ಅಜ್ಞಾನದ ಅಂಧಕಾರ ಕಳೆವ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 6:48 IST
Last Updated 10 ಡಿಸೆಂಬರ್ 2013, 6:48 IST

ಹರಿಹರ: ‘ದೇವರು ಒಬ್ಬನೇ ಎಂಬ ಮನೋಭಾವ ಬೆಳೆಸಿಕೊಂಡಾಗ ಸಹೋದರತ್ವ ಜಾಗೃತವಾಗುತ್ತದೆ’ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಯ್ಯಪ್ಪಸ್ವಾಮಿ ಮಹಾ ದೀಪೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಮಹಾದೀಪೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಅಜ್ಞಾನವೆಂಬ ಅಂಧಕಾರ  ಕಳೆದು ಜ್ಞಾನ ಬೆಳಕು ಪಡೆಯುವ ಉದ್ದೇಶದಿಂದ ದೀಪೋತ್ಸವ ಆಚರಿಸುತ್ತಾರೆ. ದೀಪೋತ್ಸವದಂದು ದುರ್ಗಣ ಬಿಟ್ಟು ಸದ್ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ದೇವರ ಹೆಸರು ನಾಮಕರಣ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಬೆಳೆಯುವಾಗ ಮಕ್ಕಳು ಕೆಟ್ಟ ಹವ್ಯಾಸಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬೋಧನೆ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಜೋಡು ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ದೀಪೋತ್ಸವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆ ಯಿಂದ ಸಂಚರಿಸಿತು. ನೂರಾರು ಬಾಲಕಿಯರು ಹಾಗೂ ಯುವತಿಯರು ದೀಪೋತ್ಸವದಲ್ಲಿ ಭಾಗವಹಿಸಿದ್ದರು.

ದೀಪೋತ್ಸವದ ನಂತರ ನಡೆದ ವಿವಿಧ ಬಗೆಯ ಸಿಡಿಮದ್ದು ಹಾಗೂ ಬಾಣ ಬಿರುಸುಗಳ ಪ್ರದರ್ಶನ ನೆರಿದಿದ್ದ ಭಕ್ತರ ಮನಸೂರೆಗೊಂಡಿತ್ತು.

ಅಯ್ಯಪಸ್ವಾಮಿ ಮಹಾ ದೀಪೋತ್ಸವ ಸಮಿತಿ ವತಿಯಿಂದ ನಗರದ ತುಂಗಭದ್ರ ನದಿ ದಡದಲ್ಲಿರುವ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿ ಭಾನುವಾರ ಅನ್ನ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪ್ರಸಾದ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.