ADVERTISEMENT

ಅಡಿಕೆ ನಾಡಿನ ಆಧಿಪತ್ಯ ಯಾರದ್ದು?

ಚನ್ನಗಿರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಾ ಅಥವಾ ಇತಿಹಾಸ ಮರುಕಳಿಸುತ್ತಾ ಎಂಬುದೇ ಈಗ ಕುತೂಹಲ

ಪ್ರಕಾಶ ಕುಗ್ವೆ
Published 9 ಮೇ 2018, 9:59 IST
Last Updated 9 ಮೇ 2018, 9:59 IST

ದಾವಣಗೆರೆ: ಅಡಿಕೆ ನಾಡಿನಲ್ಲಿ ಈಗ ಬಿಸಿಲು ಹಾಗೂ ಚುನಾವಣೆ ಕಾವಿನದ್ದೇ ಸುದ್ದಿ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೇಗೆ ಏರುತ್ತಿದೆಯೋ ಅದೇ ರೀತಿ ಚುನಾವಣೆ ಚಟುವಟಿಕೆ ಏರುಗತಿಯಲ್ಲಿ ಸಾಗಿವೆ.

ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಪ್ರಮುಖ ನಾಲ್ಕೂ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅನುಭವ ಇರುವವರು. ಹಾಲಿ ಶಾಸಕ ವಡ್ನಾಳ್‌ ರಾಜಣ್ಣ (ಕಾಂಗ್ರೆಸ್), ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ (ಬಿಜೆಪಿ), ಮಾಜಿ ಶಾಸಕ ಮಹಿಮ ಪಟೇಲ್ (ಜೆಡಿಯು) ಹಾಗೂ ಜೆಡಿಎಸ್‌ ಪರಿಶಿಷ್ಟ ಪಂಗಡದ ರಾಜ್ಯ ಘಟಕದ ಅಧ್ಯಕ್ಷ ಹೊದಿಗೆರೆ ರಮೇಶ್ (ಜೆಡಿಎಸ್‌) ಈಗ ಸ್ಪರ್ಧಾ ಕಲಿಗಳು.

ಗೆದ್ದವರು ಇನ್ನೊಮ್ಮೆ ಗೆದ್ದಿಲ್ಲ!

ADVERTISEMENT

ಕ್ಷೇತ್ರದ ಮತದಾರರು ಒಮ್ಮೆ ಗೆದ್ದವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಲ್ಲ. 1985ರ ಚುನಾವಣೆಯಿಂದಲೂ ಇದು ನಿರಂತರವಾಗಿ ನಡೆದುಕೊಂಡು ಬಂದಿದೆ. ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ಪಟೇಲ್‌ರಿಗೂ ಇಲ್ಲಿನ ಮತದಾರರು ಸೋಲು–ಗೆಲುವಿನ ರುಚಿಯನ್ನು ಸಮಾನವಾಗಿಯೇ ಉಣಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ವಡ್ನಾಳ್‌ ರಾಜಣ್ಣ ಈಗಿನ ಚುನಾವಣೆಯಲ್ಲಿ ಗೆಲ್ಲುತ್ತಾರಾ ಎಂಬುದು ಕುತೂಹಲ. ವಡ್ನಾಳ್‌ ಗೆದ್ದರೆ ಹೊಸ ಇತಿಹಾಸ ನಿರ್ಮಾಣ, ಇಲ್ಲದಿದ್ದರೆ ಇತಿಹಾಸ ಮುಂದುವರಿಕೆ.

ಈ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕೆಲಸಗಳಿಂದ ತಮ್ಮ ಗೆಲುವು ಸುಲಭ ಎಂಬ ವಿಶ್ವಾಸದಲ್ಲಿದ್ದಾರೆ ವಡ್ನಾಳ್‌. ಆದರೆ, ಆ ಅಷ್ಟೂ ಅಭಿವೃದ್ಧಿ ಕೆಲಸಗಳನ್ನು ಗುತ್ತಿಗೆ ಪಡೆದವರು ಯಾರು ಎಂಬುದು ನಿಮಗೆ ಗೊತ್ತೆ ಎಂದು ಪ್ರಶ್ನಿಸುತ್ತಾರೆ ಅವರದೇ ಪಕ್ಷದ ಕೆಲವು ಮುಖಂಡರು. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕಂಡ ನೀರಿನ ತೊಂದರೆಯನ್ನು ನಾವು ಅರ್ಧ ಶತಮಾನದಲ್ಲಿ ಅನುಭವಿಸಿಲ್ಲ. ಕ್ಷೇತ್ರದ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಸಕರು ಸಮರ್ಥ ಕ್ರಮ ಕೈಗೊಂಡಿಲ್ಲ. ಇದೇ ಅವರಿಗೆ ವಿರೋಧಿ ಅಲೆಯಾಗಿ ಕಾಡುತ್ತಿದೆ ಎನ್ನುತ್ತಾರೆ ವಿರೋಧ ಪಕ್ಷದ ಮುಖಂಡರು.

ಬಿಜೆಪಿ ಆಡಳಿತದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ತಾವೇ ಮಾಡಿಸಿದ್ದು ಎಂದು ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಕ್ಷೇತ್ರದ ನೀರಾವರಿ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿ ಮತಯಾಚಿಸುತ್ತಿದ್ದಾರೆ ಮಾಡಾಳ್‌ ವಿರೂಪಾಕ್ಷಪ್ಪ. ಆದರೆ, ಇವರೇ ಶಾಸಕರಾಗಿದ್ದಾಗ ನೀರಾವರಿ ಸಮಸ್ಯೆ ಏಕೆ ಪರಿಹರಿಸಿಲ್ಲ ಎಂಬ ಪ್ರಶ್ನೆ ಕಾಂಗ್ರೆಸ್‌ ಮುಖಂಡರದ್ದು. 

ಹೊದಿಗೆರೆ ರಮೇಶ್‌ 2013ರ ಚುನಾವಣೆಯಲ್ಲಿ 28,900 ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು. ‍ಈ ಬಾರಿ ಪರಿಶಿಷ್ಟ ಪಂಗಡದ ಮತಗಳ ಕ್ರೋಡೀಕರಣ ಮಾಡಿಕೊಂಡಿದ್ದಾರೆ. ಎಲ್ಲಾ ಸಮುದಾಯಗಳ ಯುವಪಡೆಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.

ಮಹಿಮ ಪಟೇಲ್ ಕ್ಷೇತ್ರದಲ್ಲಿ ತಮ್ಮದೇ ಆದ ಮತ ಬ್ಯಾಂಕ್‌ ಹೊಂದಿದ್ದಾರೆ. ತಮ್ಮದೇ ನೆಲೆಯಲ್ಲಿ ಈಗ ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದು, ಅಲ್ಪಸಂಖ್ಯಾತ ಸಮುದಾಯವನ್ನೇ ಬಹುವಾಗಿ ನೆಚ್ಚಿಕೊಂಡಿದ್ದಾರೆ.

ಬಹುಸಂಖ್ಯಾತರು ಇಲ್ಲಿ ಲಿಂಗಾಯತರು. ಕಾಂಗ್ರೆಸ್‌, ಬಿಜೆಪಿ, ಜೆಡಿಯು ಅಭ್ಯರ್ಥಿಗಳು ಒಂದೇ ಸಮುದಾಯಕ್ಕೆ ಸೇರಿದವರು. ಇವರಲ್ಲೂ ಒಳಪಂಗಡಗಳಿವೆ.ಯಡಿಯೂರಪ್ಪ ಹಾಗೂ ಸಿರಿಗೆರೆ ಮಠದ ಪ್ರಭಾವ ಈ ಕ್ಷೇತ್ರದಲ್ಲಿ ಪರಿಣಾಮ ಬೀರುತ್ತದೆ.ಈ ಮಧ್ಯೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳು ಕ್ರೋಡೀಕರಣಗೊಂಡರೆ ಪವಾಡ ನಿರೀಕ್ಷಿಸಬಹುದು.

2013

ವಡ್ನಾಳ್ ರಾಜಣ್ಣ (ಕಾಂಗ್ರೆಸ್) 53,355

ಕೆ. ಮಾಡಾಳ್ ವಿರೂಪಾಕ್ಷಪ್ಪ (ಕೆಜೆಪಿ) 51,582

ಹೊದಿಗೆರೆ ರಮೇಶ್ (ಜೆಡಿಎಸ್‌) 28,900

ಅಂತರ 1,773

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.