ADVERTISEMENT

`ಅಮ್ಮನಹಬ್ಬ'ಕ್ಕೆ ಹರಿದುಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 9:28 IST
Last Updated 4 ಏಪ್ರಿಲ್ 2013, 9:28 IST

ಮಲೇಬೆನ್ನೂರು: ಇಲ್ಲಿನ ಗ್ರಾಮದೇವತೆ ಉತ್ಸವ `ಅಮ್ಮನಹಬ್ಬ' ಹಬ್ಬದ ಪ್ರಯುಕ್ತ ಏಕನಾಥೇಶ್ವರಿ ಹಾಗೂ ಕೋಡಿ ಮಾರೇಶ್ವರಿ ಉತ್ಸವಮೂರ್ತಿಗಳ ಭವ್ಯ ಮೆರವಣಿಗೆ ಮಂಗಳವಾರ ತಡರಾತ್ರಿ ಅದ್ದೂರಿಯಾಗಿ ಜರುಗಿತು.

ಉತ್ಸವಕ್ಕೂ ಮುನ್ನ ಗ್ರಾಮದೇವತೆಗೆ ವಿಶೇಷ ಪೂಜೆ ಜರುಗಿದವು. ಸಾಂಪ್ರದಾಯಿಕವಾಗಿ ಗಣಪತಿ, ರಥಪೂಜೆ, ಅಷ್ಟದಿಕ್ಪಾಲಕರಿಗೆ ಬಲಿದಾನದ ನಂತರ ಉತ್ಸವಮೂರ್ತಿಯ ರಥಾರೋಹಣ, ಮಹಾಮಂಗಳಾರತಿ ಮಾಡಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಿದರು. ಏಕನಾಥೇಶ್ವರಿ, ಕೋಡಿಮಾರೇಶ್ವರಿ ಉಧೋ ಉಧೋ..., ಹುಲಿಗ್ಯೋ, ಹುಲಿಗ್ಯೋ ಘೋಷ ಮುಗಿಲು ಮುಟ್ಟಿತ್ತು. 

ಮಂಗಳವಾದ್ಯ, ಕೇರಳದ ತ್ರಿಚ್ಚೂರಿನ  `ಮೈತ್ರಿ ಸಿಂಗಾರಿ ಮೇಳಂ'ದ ಕಲಾವಿದರ ಚಂಡೆ ಕಲಾಮೇಳ, ಡೊಳ್ಳು ಕುಣಿತ, ನಾಸಿಕ್ ಡೋಲು, ಭಜನಾತಂಡಗಳು, ಕೀಲು ಕುದುರೆ ನೃತ್ಯ, ಬೆದರುಗೊಂಬೆಗಳು ಉತ್ಸವಕ್ಕೆ ಕಳೆ ತಂದಿದ್ದವು.

ರಾಜಬೀದಿ, ವಿವಿಧ ದೇವಾಲಯ, ಮೂಖ್ಯ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಮುಖ್ಯವೃತ್ತದಲ್ಲಿ ಬಗೆಬಗೆಯ ಪಟಾಕಿ ಸಿಡಿಮದ್ದು ಪ್ರದರ್ಶನ. ವೈಭವದ ಮೆರವಣಿಗೆ ಜನಮನಸೂರೆಗೊಂಡವು. ಮಧ್ಯರಾತ್ರಿ ಲಕ್ಷಾಂತರ ಜನತೆ ಉತ್ಸವ ವೀಕ್ಷಣೆ ಮಾಡಿದರು. ಪೋಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಬುಧವಾರ ಬೆಳಿಗ್ಗೆ ಘಟೆಪೂಜೆ ನಂತರ ಹಿಟ್ಟಿನಕೋಣದ ಬಲಿ ನೀಡಲಾಯಿತು. ಭಕ್ತರು ಬೇವಿನಸೊಪ್ಪಿನ ಉಡುಗೆ, ತೊಟ್ಟು ಹರಕೆ ಸಮರ್ಪಿಸಿದರು.

ವಿಶೇಷ: ಭಕ್ತರೊಬ್ಬರು ಏಕನಾಥೇಶ್ವರಿ ಉತ್ಸವಮೂರ್ತಿಗೆ ಬಂಗಾರದ ಕಿರೀಟ ಧಾರಣೆ ಮಾಡಿಸಿ ಹರಕೆ ಸಮರ್ಪಿಸಿದ್ದು ವಿಶೇಷ.
ಗುರುವಾರದ `ವಾರದ ಸಂತೆ' ದೇವಾಲಯದ ಸುತ್ತಮುತ್ತ ನಡೆಯಲಿದ್ದು ವ್ಯಾಪಾರಿಗಳು ಸಹಕರಿಸುವಂತೆ ಆಯೋಜಕರು ಕೋರಿದ್ದಾರೆ. ಸಂಜೆ ಬೆಲ್ಲದ ಬಂಡಿ ಪ್ರದರ್ಶನ ಏರ್ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.