ADVERTISEMENT

ಉಚ್ಚಂಗಿದುರ್ಗ: ಉತ್ಸವಾಂಬೆ ಅದ್ದೂರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 10:25 IST
Last Updated 25 ಮಾರ್ಚ್ 2012, 10:25 IST

ಹರಪನಹಳ್ಳಿ: ಮಧ್ಯ ಕರ್ನಾಟಕದ ಇತಿಹಾಸಿಕ ಪ್ರಸಿದ್ಧಿಯ ಶಕ್ತಿದೇವತೆಯ ಕೇಂದ್ರವಾಗಿರುವ ತಾಲ್ಲೂಕಿನ ಉಚ್ಚಂಗಿದುರ್ಗದ ಉತ್ಸವಾಂಬೆಯ ಜಾತ್ರೋತ್ಸವ ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ-ಸಂಭ್ರಮದ ಮಧ್ಯೆ ವೈಭವೋಪೇತವಾಗಿ ನೆರವೇರಿತು.

ಉಚ್ಚಂಗೆಮ್ಮ, ಉತ್ಸವಾಂಬೆ, ಹಾಲಮ್ಮ...ಹೀಗೆ ಹಲವು ಬಿರುದಾವಳಿ ಹಾಗೂ ಪವಾಡಗಳ ಮೂಲಕ ಲಕ್ಷಾಂತರ ಭಕ್ತರ ದೈವೀಕರಣಕ್ಕೆ ಪಾತ್ರವಾಗಿರುವ ಉಚ್ಚಂಗೆಮ್ಮದೇವಿ ಜಾತ್ರೆಯ ಅಂಗವಾಗಿ ಕುಂಕುಮಾರ್ಚನೆ, ಎಲೆಪೂಜೆ, ಕ್ಷೀರಾಭಿಷೇಕ ಹಾಗೂ ಓಕುಳಿ ಸೇರಿದಂತೆ ವಿವಿಧ ಉತ್ಸವ ಹಾಗೂ ಪೂಜಾ ವಿಧಿ-ವಿಧಾನಗಳು ಮಾರ್ಚ್ 22ರಿಂದಲೇ ಆರಂಭವಾಗಿದ್ದು, ಮಾರ್ಚ್ 24ರಂದು ಶನಿವಾರ ಆನೆಹೊಂಡ ಉತ್ಸವ ಗಂಗೆಪೂಜೆ ಹಾಗೂ ಚಂದ್ರದರ್ಶನ ಮಾಡುವ ಮೂಲಕ ದೇವಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಳು.

ದಾವಣಗೆರೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ಗದಗ ಹಾಗೂ ಹಾವೇರಿ ಸೇರಿದಂತೆ ರಾಜ್ಯ ಹಾಗೂ ಹೊರರಾಜ್ಯದ ದಶ-ದಿಕ್ಕುಗಳಿಂದಲೂ ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತಸಮೂಹ ಉತ್ಸವಾಂಬೆಯ ಬೆಟ್ಟದ ಹಿಂಭಾಗದಲ್ಲಿನ ವಿಶಾಲವಾದ ಹಾಲಮ್ಮನ ತೋಪಿನಲ್ಲಿ ಸಮಾಗಮಗೊಂಡಿದ್ದಾರೆ. ದೈವಸ್ವರೂಪಿಣಿಯಾಗಿರುವ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತಗಣ ಶ್ರದ್ಧಾಭಕ್ತಿಯ ಮೂಲಕ ವಿವಿಧ ಹರಕೆ ತೀರಿಸಿ ಭಕ್ತಿಸಮರ್ಪಿಸಿದರು.

ಭಕ್ತರ ಹರಕೆ-ಅಭೀಷ್ಟೆಯನ್ನು ಈಡೇರಿಸುವ ಶಕ್ತಿಮಾತೆಯಾಗಿರುವ ಆರಾಧ್ಯದೈವ ಜಾತ್ರೆಯ ಅಂಗವಾಗಿ ಹಾಲಮ್ಮನತೋಪಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಜನಪದಿಯರಲ್ಲಿ ಹಾಸುಹೊಕ್ಕಿದೆ. ಹೀಗಾಗಿ ಹಾಲಮ್ಮನ ತೋಪಿನಲ್ಲಿ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಟೆಂಟ್‌ಗಳಲ್ಲಿ ಭಕ್ತರು ಬೀಡು ಬಿಟ್ಟಿದ್ದಾರೆ.
 
ತಾಲ್ಲೂಕು ಆಡಳಿತ ಪ್ರಾಣಿಬಲಿಯನ್ನು ನಿಷೇಧಿಸಿದ್ದರೂ ಸಹ, ಪೊಲೀಸರ ಕಟ್ಟೆಚ್ಚರದ ನಡುವೆಯೂ ಸಹಸ್ರಾರು ಕುರಿ-ಕೋಳಿಗಳು ಭಕ್ತರ ಭಕ್ತಿಪರಾಕಾಷ್ಠೆಯ ಉನ್ಮಾನದಲ್ಲಿ ದೇವಿಗೆ ಹರಕೆಗೆ ತೆಲೆಯೊಡ್ಡಿದವು. ಬಲಿ ತಡೆಯಲು ಪೊಲೀಸರು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಜತೆಗೆ, ಬೇವಿನುಡುಗೆ, ಪಡ್ಲಿಗಿ ತುಂಬಿಸುವುದು. ದೀಡು ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಹರಕೆ ತೀರಿಸುವ ಮೂಲಕ ಭಕ್ತರು ಭಕ್ತಿಯ ಭಾವಸಂಗಮದಲ್ಲಿ ಮಿಂದೆದ್ದರು.

ದೇವಿಯ ಹೆಸರಿನಲ್ಲಿ ತಲತಲಾಂತರದಿಂದಲೂ ಆಚರಣೆ ಮಾಡುತ್ತ ಬಂದಿರುವ ಸಾಮಾಜಿಕ ಅನಿಷ್ಟ ದೇವದಾಸಿ ಪದ್ಧತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸಾಕಷ್ಟು ಕಟ್ಟಿನಿಟ್ಟಿನ ಕ್ರಮ ಕೈಗೊಂಡಿತ್ತು. ಕಳೆದ ಮೂರ‌್ನಾಲ್ಕು ದಿನಗಳಿಂದಲೂ ಜಾತ್ರೆಯ ಅಂಗವಾಗಿ ಅನಿಷ್ಟ ಪದ್ಧತಿ ನಿಯಂತ್ರಿಸುವ ನಿಟ್ಟಿನಲ್ಲಿ `ತಲಾ ಐದು ಜನರ್ನು ಒಳಗೊಂಡ, ಐದು ತಂಡಗಳು ಜಾತ್ರೆಯಲ್ಲಿ ಹದ್ದಿನ ಕಣ್ಗಾವಲು ಹಾಕಿತ್ತು.
 
ಜತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಾಸುದೇವ್ ಹಾಗೂ  ದೇವದಾಸಿ ಮಹಿಳೆಯರ ಪುನರ್‌ವಸತಿಯ ಜಿಲ್ಲಾ ಯೋಜನಾಧಿಕಾರಿ ಮೋಕ್ಷಪತಿ ಹಾಗೂ ತಾವು ಭೇಟಿ ನೀಡಿ ಕಟ್ಟೆಚ್ಚರ ವಹಿಸಲಾಗಿತ್ತು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್. ಸಿದ್ದೇಶಪ್ಪ `ಪ್ರಜಾವಾಣಿ~ ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.