ADVERTISEMENT

ಉತ್ತಮ ವಸತಿಯುತ ಶಾಲೆ ನಿರ್ಮಾಣ

ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 5:20 IST
Last Updated 23 ಡಿಸೆಂಬರ್ 2013, 5:20 IST
ಹರಿಹರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಎಚ್. ಆಂಜನೇಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಹರಿಹರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಎಚ್. ಆಂಜನೇಯ ಸುದ್ದಿಗಾರರೊಂದಿಗೆ ಮಾತನಾಡಿದರು.   

ಹರಿಹರ: ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಸತಿಯುತ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು.

ಖಾಸಗಿ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಬಾಡಿಗೆ ಕಟ್ಟಡದಲ್ಲಿವೆ. ಶೀಘ್ರದಲ್ಲಿ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿ ಪರ ಹೋರಾಟಗಾರರ ಬಹು ದಿನದ ಹೋರಾಟದ ಪ್ರತಿಫಲವಾಗಿ ತಾಲ್ಲೂಕಿನ ಪ್ರತಿ ಹೋಬಳಿಗೆ ಒಂದು ವಸತಿಶಾಲೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶೀಘ್ರವಾಗಿ ಚಾಲನೆ ನೀಡಲಾಗುವುದು ಎಂದರು.

ಹೋಬಳಿ ಮಟ್ಟದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಸಹಕಾರದಿಂದ 10 ಎಕರೆ ಜಮೀನನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಸುತ್ತಮುತ್ತ ಜಮೀನು ದೊರೆತರೆ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಆರಂಭಿಸಲಾಗುವುದು. ವೃತ್ತಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರು ದಾವಣಗೆರೆ ಯಲ್ಲಿರುವ ವೃತ್ತಿನಿರತ ವಿದ್ಯಾರ್ಥಿ ನಿಲಯದ ಸೌಲಭ್ಯ ಪಡೆಯಬಹುದು ಎಂದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಬಿ. ಅಣ್ಣಪ್ಪ, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳು ಭೀಮಪ್ಪ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಪರಾಯುಕ್ತ ಎಚ್.ಆರ್.ತೇಗನೂರು, ಯುವ ಕಾಂಗ್ರೆಸ್ ಮುಖಂಡ ಹಬೀಬ್, ಬೇಗ್ ನಗರಸಭೆ ಸದಸ್ಯ ವಿರೂಪಾಕ್ಷ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ. ಭರಮಪ್ಪ, ಬಿ.ನಿಂಗಪ್ಪ, ಎಚ್. ನಿಜಗುಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪಿ.ಕೆ. ಮಹಂತೇಶ್, ಜಿಲ್ಲಾ ಬಿಸಿಎಂ ಅಧಿಕಾರಿ ಸರೋಜಮ್ಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಿ. ಪರಮೇಶ್ವರಪ್ಪ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಬಸವರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.