ದಾವಣಗೆರೆ: ಇಲ್ಲಿನ ಎಸ್.ಎಂ.ಕೃಷ್ಣ ನಗರದಲ್ಲಿರುವ ಬಾಬು ಜಗಜೀವನರಾಂ ಭವನದ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವುದರಿಂದ ಭವನದ ಕಿಟಕಿ ಗಾಜುಪುಡಿಯಾಗಿದೆ. ಇದು ಇನ್ನೂ ಉದ್ಘಾಟನೆಗೊಂಡಿಲ್ಲ!
ಭವನದ ಉದ್ಘಾಟನೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರೂ, ಅಧಿಕಾರಿಗಳದ್ದು ಮಾತ್ರ ನಿರ್ಲಕ್ಷ್ಯ ಮನೋಭಾವ ಎಂದು ಆರೋಪಿಸುತ್ತಾರೆ ಸಾರ್ವಜನಿಕರು. ₹ 2 ಕೋಟಿ ವೆಚ್ಚ: ಎರಡು ವರ್ಷಗಳ ಹಿಂದೆ ₹ 2 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಗೊಂಡಿದೆ. ಕಾಮಗಾರಿಯೂ ಪೂರ್ಣಗೊಂಡಿದೆ. ಆದರೆ, ಸಾರ್ವಜನಿಕ ಬಳಕೆ ಇನ್ನೂ ಲಭ್ಯವಾಗಿಲ್ಲ.
ಎರಡು ವರ್ಷದಿಂದ ಹಾಗೇ ಉಳಿದಿ ರುವುದರಿಂದ ಕಿಡಿಗೇಡಿಗಳು ಭವನದ ಕಿಟಕಿ ಗಾಜು ಪುಡಿ ಮಾಡಿದ್ದಾರೆ. ಭವನದ ಒಳ ಪ್ರವೇಶದಲ್ಲಿ ಪೈಪು ಕಿತ್ತುಹಾಕಿದ್ದಾರೆ. ಈಗ ಉದ್ಘಾಟನೆ ಮಾಡಬೇಕಾದರೆ ದುರಸ್ತಿ ಮಾಡ ಬೇಕಿದೆ. ಅದಕ್ಕಾಗಿ ಮತ್ತೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗಿದೆ. ಭವನವನ್ನು ದುರಸ್ತಿಗೊಳಿಸಿ, ಶೀಘ್ರ ಕಟ್ಟಡ ಉದ್ಘಾಟಿಸಬೇಕು. ಇಲ್ಲವೇ ಯಾರಿಗಾದರೂ ಜವಾಬ್ದಾರಿ ವಹಿಸ ಬೇಕು ಎಂಬ ಒತ್ತಾಯ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ (ಸ್ವಾಭಿಮಾನಿ ಬಣ) ರುದ್ರೇಶ್ ಅವರದ್ದು.
ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಎರಡು ವರ್ಷಗ ಳಿಂದಲೂ ಕಟ್ಟಡ ಉದ್ಘಾಟನೆಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇದು ನನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಮಂಜುನಾಥ್, ಪರಮೇಶ್, ಪ್ರಶಾಂತ್‌ಗೌಡ. ಈಚೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ ಹನುಮಂತಪ್ಪ ಭೇಟಿ ನೀಡಿ, ಹಾಳಾಗಿರುವ ಭವನದ ಕಿಟಕಿ, ನಲ್ಲಿಗಳನ್ನು ದುರಸ್ತಿ ಪಡಿಸುವ ಬಗ್ಗೆ ಭರವಸೆ ನೀಡಿದರು.
ಹಸ್ತಾಂತರ ಮಾಡಿಲ್ಲ: ನಿರ್ಮಿತಿ ಕೇಂದ್ರದ ವತಿಯಿಂದ ಭವನ ನಿರ್ಮಿಸಲಾಗಿದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ನಮ್ಮಲ್ಲಿ ದಾಖಲೆ ಇಲ್ಲ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ ಹನುಮಂತಪ್ಪ.
ಶೀಘ್ರ ಉದ್ಘಾಟನೆ
ಉದ್ಘಾಟನೆಗೆ ಸರಿಯಾದ ದಿನಾಂಕ ನಿಗದಿ ಆಗಿಲ್ಲ. ಇದರಿಂದ ಸ್ವಲ್ಪ ತಡವಾಗಿದೆ. ಶೀಘ್ರದಲ್ಲಿ ಉದ್ಘಾಟನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕುಮಾರ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
***
ಭವನ ನಿರ್ಮಾಣ ಮಾಡಿ ಎರಡು ವರ್ಷ ಕಳೆದಿದೆ. ಭವನ ರಕ್ಷಣೆಗೆ ಸಿಬ್ಬಂದಿ ನೇಮಕ ಮಾಡಿಲ್ಲ. ಇದರಿಂದ ಸ್ಥಳೀಯ ಕಿಡಿಗೇಡಿಗಳು ಭವನದ ಮೇಲೆ ಕಲ್ಲು ತೂರಿ ಕಿಟಕಿ ಗಾಜು ಪುಡಿ ಮಾಡಿದ್ದಾರೆ.
–ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಳಗ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.