ಹರಪನಹಳ್ಳಿ: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಸಮಾಜವಾದಿ ಹಿನ್ನೆಲೆಯಿಂದ ರಾಜಕಾರಣ ಪ್ರವೇಶ ಮಾಡಿದ್ದರೂ ಸಹ, ವ್ಯವಹಾರಿಕ ಜಗತ್ತಿನಲ್ಲಿ, ವ್ಯವಸ್ಥೆಯಲ್ಲಿನ ಕೆಲ ಅನಿವಾರ್ಯ ಸಮಾಜಮುಖಿ ಸಂದರ್ಭಗಳಲ್ಲಿ ಅವರ ಒಲವು-ನಿಲುವುಗಳಲ್ಲಿ ರಾಜೀ ಮನೋಭಾವ ಕಾಣುತ್ತಿತ್ತು ಎಂದು ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶಕುಮಾರ್ ವಿಶ್ಲೇಷಿಸಿದರು.
ಸ್ಥಳೀಯ ಎಡಿಬಿ ಪ್ರಥಮದರ್ಜೆ ಕಾಲೇಜು ಮೈದಾನದಲ್ಲಿ ಸೋಮವಾರ ಪ್ರಕಾಶ್ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ದಿ.ಎಂ.ಪಿ. ಪ್ರಕಾಶ್‌ರಿಗೆ ಶ್ರದ್ಧಾಂಜಲಿ ಹಾಗೂ ‘ಎಂ.ಪಿ. ಪ್ರಕಾಶ್ ಮತ್ತು ಪ್ರಸ್ತುತ ರಾಜಕಾರಣ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.
ದಿ.ಪ್ರಕಾಶ್ ಅವರು ವಿವಿಧ ಖಾತೆಯ ಮಂತ್ರಿಯಾಗಿ ಅವಕಾಶ ದೊರಕಿದ್ದಾಗ ಅವರ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ಸಿಕ್ಕ ಅಧಿಕಾರದ ಅವಧಿಯಲ್ಲಿ ಅಪಾರವಾದ ಹಣ ಗಳಿಸಿಕೊಳ್ಳಬಹುದಾಗಿತ್ತು. ಇನ್ನೊಂದು ತಾವು ನಂಬಿದ ಸೈದ್ಧಾಂತಿಕ ಹಿನ್ನೆಲೆಯಿಂದ ಏನೆಲ್ಲ ಹೊಸ ಪ್ರಗತಿಪರ ಯೋಜನೆಗಳನ್ನು ಜಾರಿ ಮಾಡಬಹುದಿತ್ತು ಎನ್ನುವುದು. ಈ ಹಿನ್ನೆಲೆಯಲ್ಲಿಯೇ ನಾವು ನೋಡಿದಾಗ ರಾಮಕೃಷ್ಣ ಹೆಗಡೆ ಅವರ ನಾಯಕತ್ವದಲ್ಲಿ ಪ್ರಗತಿಪರ ಆಲೋಚನೆಗಳನ್ನು ತೆಗೆದುಕೊಳ್ಳುತ್ತಿದ್ದ ಕೆಲವೇ ಕೆಲವುಜನ ಮಂತ್ರಿಗಳಲ್ಲಿ ಪ್ರಕಾಶ್ ಸಹ ಒಬ್ಬರಾಗಿದ್ದರು ಎಂದು ಸ್ಮರಿಸಿದರು.
ರಾಜ್ಯದಲ್ಲಿ ರೈತ ಮಾಡಿದ್ದ ಸಾಲ, ಬಡ್ಡಿ, ಚಕ್ರಬಡ್ಡಿ ಸೇರಿ ಸಾಲದ ಮೂರುಪಟ್ಟು ಹೆಚ್ಚಾಗಿತ್ತು. ದೇಶದಲ್ಲಿಯೇ ಕ್ರಾಂತ್ರಿಕಾರಿಕ ನಿರ್ಣಯ ತೆಗೆದುಕೊಂಡು, ರೈತ ಸಾಲದ ಅಸಲನ್ನು ಪಾವತಿಸಿದರೆ, ಬಡ್ಡಿ, ಚಕ್ರಬಡ್ಡಿಯನ್ನು ಮನ್ನಾ ಮಾಡುವ ಯೋಜನೆಯನ್ನು ಹೆಗಡೆ ಸಂಪುಟದ ಸದಸ್ಯರು ಜಾರಿ ತರುವುದರ ಹಿಂದೆ, ಸಮಾಜವಾದಿ ಸೈದ್ಧಾಂತಿಕ ಹಿನ್ನೆಲೆಯ ಪ್ರಕಾಶ್‌ಅವರ ಪ್ರಭಾವ, ಒತ್ತಡ ಇತ್ತು ಎಂದು ಹೇಳಿದರು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಡಾ.ಮಲ್ಲಿಕಾ ಘಂಟಿ ‘ಎಂ.ಪಿ. ಪ್ರಕಾಶ್ ಮತ್ತು ಪ್ರಸ್ತುತ ರಾಜಕಾರಣ’ ಕುರಿತು ಉಪನ್ಯಾಸ ಮಂಡಿಸಿದರು.
ಚಿತ್ರನಟ ಹಾಗೂ ಕೇಂದ್ರದ ಮಾಜಿ ಸಚಿವ ಅಂಬರೀಶ್ ಕಾರ್ಯಕ್ರಮ ಉದ್ಘಾಟಿಸಿದರು.ಸ್ಥಳೀಯ ತೆಗ್ಗಿನಮಠದ ಚಂದ್ರಮೌಳೀಶ್ವರ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಪಿ.ಟಿ. ಪರಮೇಶ್ವರನಾಯ್ಕ, ವಿರಾಜಪೇಟೆ ಮಾಜಿ ಶಾಸಕ ಬಸವರಾಜ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಪಿ. ರವೀಂದ್ರ, ಲೋಕಶಿಕ್ಷಣ ಸಮಿತಿ ಟ್ರಸ್ಟಿ ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.