ADVERTISEMENT

ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಬಹಿಷ್ಕಾರ ಇಲ್ಲ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 6:35 IST
Last Updated 23 ಏಪ್ರಿಲ್ 2012, 6:35 IST

ದಾವಣಗೆರೆ: ರಾಜ್ಯದ 217 ಕೇಂದ್ರಗಳಲ್ಲಿ ಏ. 23ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೇಡಿಕೆ ಈಡೇರಿಕೆಗಾಗಿ ನಂತರ ಹೋರಾಟ ಮುಂದುವರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ಪಷ್ಟಪಡಿಸಿದೆ.

ಮೌಲ್ಯಮಾಪನ ಕಾರ್ಯದಲ್ಲಿ 47 ಸಾವಿರ ಮಂದಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಬಹಿಷ್ಕಾರ ನಿರ್ಧಾರ ಹಿಂಪಡೆಯಲಾಗಿದ್ದು, ಎಲ್ಲರೂ ಹಾಜರಾಗಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏ. 19ರಂದು, ಶಿಕ್ಷಕರ ವೇತನ ತಾರತಮ್ಯ ನಿವಾರಣೆ  ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ  ಮಾತು ತಪ್ಪಿದ್ದಾರೆ. ಇದು ಶಿಕ್ಷಕ ಸಮುದಾಯಕ್ಕೆ ಅತೃಪ್ತಿ ತಂದಿದೆ. ಆದರೂ ಸಹ, ಮೌಲ್ಯಮಾಪನ ಬಹಿಷ್ಕರಿಸದೆ ಇರಲು ನಿರ್ಧರಿಸಲಾಗಿದೆ. ಮೌಲ್ಯಮಾಪನ ಕಾರ್ಯಗಳಲ್ಲಿ ತಪ್ಪು ಮಾಡಿದ ಮೌಲ್ಯಮಾಪಕರಿಗೆ ಪರೀಕ್ಷಾ ಮಂಡಳಿ ದಂಡ ವಿಧಿಸುತ್ತಿದೆ. ಈ ಬಗ್ಗೆ ಪಾರದರ್ಶಕತೆ ಪ್ರದರ್ಶಿಸಬೇಕು. ಇಂದಿನ ಬೆಲೆ ಏರಿಕೆಗೆ ತಕ್ಕಂತೆ, ಮೌಲ್ಯಮಾಪಕರಿಗೆ ಸಂಭಾವನೆ ನೀಡಬೇಕು. ಒಬ್ಬರಿಗೆ ್ಙ 500 ವಿಶೇಷ ಭತ್ಯೆ ಕೊಡಬೇಕು. ಮುಂದಿನ ವರ್ಷ ಎಲ್ಲ ಸಂಭಾವನೆಗಳ ಪರಿಷ್ಕರಣೆ ಆಗಬೇಕು ಎಂದು ಒತ್ತಾಯಿಸಿದರು.

ಮೌಲ್ಯಮಾಪನ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ತೊಂದರೆಗಳಿಗೆ ತಕ್ಷಣ ಸ್ಪಂದಿಸಲು ತುರ್ತು ಚಿಕಿತ್ಸೆ ನೀಡಲು, ಜಿಲ್ಲೆಗೊಂದು ಸಂಚಾರಿ ಚಿಕಿತ್ಸಾ ವಾಹನದ ವ್ಯವಸ್ಥೆ ಮಾಡಬೇಕು. ಮೌಲ್ಯಮಾಪನ ಕೇಂದ್ರಗಳಲ್ಲಿ ಸಮರ್ಪಕ ಮೂಲಸೌಲಭ್ಯ ಒದಗಿಸಬೇಕು. ಶುದ್ಧೀಕರಿಸಿದ ನೀರು ಸರಬರಾಜು ಮಾಡಬೇಕು. ಕ್ಯಾಂಟೀನ್ ವ್ಯವಸ್ಥೆಯನ್ನು ಪರೀಕ್ಷಾ ಮಂಡಳಿ, ಕಡಿಮೆ ದರದಲ್ಲಿ ಒದಗಿಸಬೇಕು. ಮಂಡಳಿ, ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಶುಲ್ಕ ಮತ್ತು ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.

ಮಂಡಳಿ ಸಿಬ್ಬಂದಿ ಹಾಗೂ ಅಧಿಕಾರಿಗಳು ಮಾಡುವ ತಪ್ಪಿಗೆ ದಂಡ ವಿಧಿಸುವ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.1955ರವರೆಗೆ ಪ್ರಾರಂಭ ಆಗಿರುವ ಅನುದಾನರಹಿತ ಶಾಲಾ -ಕಾಲೇಜುಗಳಿಗೆ ಸಹಾಯನುಧನ ನೀಡುವುದು ಮತ್ತು ಶೇ. 75:25 ಅನುಪಾತದಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕ್ರಮವನ್ನು ಕೂಡಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘದ ದೇವೇಂದ್ರಪ್ಪ, ಹನುಮಂತರೆಡ್ಡಿ, ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡ್ದ್ದಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.