ADVERTISEMENT

ಎಸ್‌ವಿಆರ್ ಸುಳ್ಳು ಭರವಸೆ: ರಾಜೇಶ್ ಆರೋಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:10 IST
Last Updated 3 ಅಕ್ಟೋಬರ್ 2012, 4:10 IST

ಜಗಳೂರು: ತಾಲ್ಲೂಕಿನ ಬಹುತೇಕ ಹಳ್ಳಿಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಶಾಸಕ ಎಸ್.ವಿ. ರಾಮಚಂದ್ರ ಜನರಿಗೆ ಸುಳ್ಳು ಭರವಸೆ ನೀಡುತ್ತಾ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ರಾಜೇಶ್ ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ `ಕಾಂಗ್ರೆಸ್‌ನೊಂದಿಗೆ ಬನ್ನಿ, ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ರಸ್ತೆಗಳಿಲ್ಲ. ಸಮರ್ಪಕ ಕುಡಿಯುವ ನೀರು ಪೂರೈಕೆ ಇಲ್ಲ. ಯಾವುದೇ ಹೊಸ ರಸ್ತೆ ನಿರ್ಮಿಸಿಲ್ಲ. ಕ್ಷೇತ್ರದಲ್ಲಿ 15ಸಾವಿರದಿಂದ 20 ಸಾವಿರ ಮನೆಗಳು ಮಂಜೂರಾಗಿವೆ ಎಂದು ಶಾಸಕರು ಸುಳ್ಳು ಹೇಳುತ್ತಿದ್ದಾರೆ. ವಾಸ್ತವವಾಗಿ ಮಂಜೂರಾಗಿರುವುದು ಕೇವಲ 3 ಸಾವಿರ ಮಾತ್ರ. ದುಡ್ಡಿನ ಆಸೆಗೆ ಬಿಜೆಪಿಗೆ ರ್ಸೇಡೆಯಾದ ಶಾಸಕರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ದೂರಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಶಾಸಕರು ಹಣದ ಬಲದಿಂದ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕ್ಷೇತ್ರದಲ್ಲಿ ಹಣವನ್ನು ಬೇಕಾಬಿಟ್ಟಿ  ಹಂಚಲು ಪ್ರಾರಂಭಿಸಿದ್ದಾರೆ. ಶಾಸಕರ ಸಾಧನೆ ಶೂನ್ಯ ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಉಪಾಧ್ಯಕ್ಷ ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಪಟೇಲ್ ಕಲ್ಲೇಶ್‌ರಾಜ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಬಾಬು, ಮುಖಂಡರಾದ ದೇವೇಂದ್ರಪ್ಪ,  ಶಂಭುಲಿಂಗಪ್ಪ, ರಸೂಲ್‌ಖಾನ್, ಲತೀಫ್‌ಸಾಬ್, ಇಕ್ಬಾಲ್, ಕೇಶವಮೂರ್ತಿ, ನಾಗಮ್ಮ, ತಿಮ್ಮಾರೆಡ್ಡಿ, ಶೇಖರಪ್ಪ,  ಷಂಶೀರ್ ಅಹ್ಮದ್ ಹಾಜರಿದ್ದರು.

್ಙ 300 ಕೋಟಿ ಅನುದಾನ
ಮೂರು ವರ್ಷಗಳಲ್ಲಿ  ರಾಜ್ಯ ಸರ್ಕಾರದಿಂದ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ್ಙ 300 ಕೋಟಿ ಅನುದಾನ ಹಾಗೂ 14 ಸಾವಿರ ಮನೆಗಳು ಮಂಜೂರಾಗಿವೆ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದರು.
ತಾಲ್ಲೂಕಿನ ಹೊಸಕರೆ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರಧೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ  5 ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಗುಡಿಸಲು ರಹಿತ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಕ್ಷೇತ್ರಕ್ಕೆ ದ್ವಿಮುಖ ರಸ್ತೆ, ಕುಡಿಯುವ ನೀರು, ಕ್ರೀಡಾಂಗಣ, ಅಗ್ನಿಶಾಮಕ ಠಾಣೆ, ಹೊಸ ರಸ್ತೆಗಳ ನಿರ್ಮಾಣ, ಬೃಹತ್ ಚೆಕ್‌ಡ್ಯಾಂಗಳ ನಿರ್ಮಾಣ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ರೈತರ ್ಙ 123 ಕೋಟಿ ಸಿಡಿಸಿಸಿ ಬ್ಯಾಂಕ್ ಸಾಲವನ್ನು ರಾಜ್ಯಸರ್ಕಾರ ಮನ್ನಾ ಮಾಡಿದೆ ಎಂದರು.

ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಂಸತ್ ಸದಸ್ಯರ ಸಹಕಾರದಿಂದ ಭದ್ರಾ ಮೇಲ್ದಂಡೆ ಯೋಜನೆ ತಾಲ್ಲೂಕಿಗೆ ಜಾರಿಯಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ನಾಗರಾಜ್, ಎಪಿಎಂಸಿ ಅಧ್ಯಕ್ಷ ರಘುರಾಮ್, ಬಿಜೆಪಿ ಅಧ್ಯಕ್ಷ ಎಸ್.ಕೆ. ಮಂಜುನಾಥ್, ಶಿವಕುಮಾರಯ್ಯ, ಡಿ.ವಿ. ನಾಗಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಮ್ಮ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ  ಶ್ರೀನಿವಾಸ್, ಓಬಪ್ಪ, ತಹಶೀಲ್ದಾರ್ ವಿ.ಆರ್. ಪಾಟೀಲ್, ಎಇಇ ಲಿಂಗರಾಜ್, ಸಿಪಿಐ ಜೆ,ಎಸ್. ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.