ADVERTISEMENT

ಕಲಿಕೆಯಲ್ಲಿ ಕೀಳರಿಮೆ ಬೇಡ, ಆತ್ಮವಿಶ್ವಾಸವಿರಲಿ

ತಂತ್ರಜ್ಞಾನ ಮಾಹಿತಿ, ಬಳಕೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಪ್ರೊ.ವೃಷಭೇಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 7:07 IST
Last Updated 17 ಏಪ್ರಿಲ್ 2018, 7:07 IST

ದಾವಣಗೆರೆ: ಗಣಿತ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವುದು ಅವಶ್ಯ ಎಂದು ಡಯಟ್‌ ಪ್ರಾಂಶುಪಾಲ ಪ್ರೊ.ಎಚ್‌.ಕೆ. ಲಿಂಗರಾಜು ಹೇಳಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಮಾಹಿತಿ ಹಾಗೂ ಬಳಕೆ ಕುರಿತು ನಗರದ ಬಿಐಇಟಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಟೆಕ್ನಾಲಜಿ ಬ್ಯಾರಿಯರ್‌ ರಿಡಕ್ಷನ್‌ ಪ್ರೋಗ್ರಾಮ್‌’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಗಣಿತ, ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಹೆಚ್ಚು ತಿಳಿವಳಿಕೆಯ ಅಗತ್ಯವಿದೆ. ಆದರೆ, ಇವುಗಳ ಕಲಿಕೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಾಕಷ್ಟು ಹಿಂದುಳಿದಿದ್ದಾರೆ. ಅವರಲ್ಲಿನ ಆತಂಕವನ್ನು ದೂರ ಮಾಡಿ ಕಲಿಕಾ ಆಸಕ್ತಿಯನ್ನು ಬೆಳೆಸುವುದಕ್ಕಾಗಿಯೇ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

ಇತ್ತೀಚಿನ ವಿದ್ಯಾರ್ಥಿಗಳು ಆರಾಮದಾಯಕ ಜೀವನ ಬಯಸುತ್ತಿದ್ದಾರೆ. ಹೀಗಾಗಿಯೇ ಅವರಲ್ಲಿ ಬೌದ್ಧಿಕ ಬೆಳವಣಿಗೆಯಾಗುತ್ತಿಲ್ಲ. ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡರೆ ಜೀವನದಲ್ಲಿ ಪ್ರಗತಿ ಸಾಧ್ಯ ಎಂದರು.

ಆಧುನಿಕ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆತಂಕ ಹಾಗೂ ಕೀಳರಿಮೆಯನ್ನು ಬಿಟ್ಟು ಪ್ರತಿಯೊಬ್ಬರೂ ಕಲಿಕೆಯಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಅವರು, ‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಪೋಷಕರು ಕೂಡ ಹಿಂದುಳಿದಿದ್ದಾರೆ. ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಯಲ್ಲಿದ್ದು, ಇದಕ್ಕೆ ಎಲ್ಲರೂ ಹೊಂದಿಕೊಳ್ಳಬೇಕು’ ಎಂದರು.

ಗ್ರಾಮೀಣ ಪ್ರದೇಶಗಳ ವಿವಿಧ ಪ್ರೌಢಶಾಲೆಗಳಲ್ಲಿ 9ನೇ ತರಗತಿ ಅಧ್ಯಯನ ಮಾಡುತ್ತಿರುವ 30 ವಿದ್ಯಾರ್ಥಿಗಳು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.

ಬಿಐಇಟಿ ಚೇರ್‌ಮನ್‌ ಎ.ಸಿ. ಜಯಣ್ಣ, ಡಾ.ಕೆ.ಎಸ್‌. ಬಸವರಾಜಪ್ಪ, ಡಾ.ಇಟಗಿ ಕೊಟ್ರೇಶಪ್ಪ, ಎಂ.ಎಸ್‌. ನಾಗರಾಜ್‌ ಅವರೂ ಇದ್ದರು.
ಉಪನ್ಯಾಸಕಿ ವಿ.ಕೆ.ಗೀತಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.