ADVERTISEMENT

ಕಳಪೆ ಬಿಟಿ ಹತ್ತಿ: ಪರಿಹಾರಕ್ಕೆ ರೈತ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 6:38 IST
Last Updated 19 ಸೆಪ್ಟೆಂಬರ್ 2013, 6:38 IST

ದಾವಣಗೆರೆ: ತಾಲ್ಲೂಕಿನ ಹಲವು ಭಾಗಗಳಲ್ಲಿ ಬಿತ್ತಿದ ಮೈಕೊ ಕಂಪೆನಿಯ ಕನಕ ಬಿಟಿ ಹತ್ತಿ ಕಳಪೆಯಾಗಿದ್ದು, ಬಿತ್ತಿ 120 ದಿನಗಳಾದರೂ ಸೋಂಪಾಗಿ ಬೆಳೆದ ಗಿಡಗಳು ಕಾಯಿಗಟ್ಟದ ಕಾರಣ ರೈತರಿಗೆ ಭಾರಿ ನಷ್ಟವಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಆರೋಪಿಸಿದರು.

ತಾಲ್ಲೂಕಿನ ಕಂದನಕೋವಿ, ಗಂಗನಕಟ್ಟೆ, ಕೊಗ್ಗನೂರು, ನರಸೀಪುರ, ಹೊನ್ನೂರು, ಹೊನ್ನೂರು ಗೊಲ್ಲರಹಟ್ಟಿ, ನೇರ್ಲಿಗಿ, ಸುಲ್ತಾನಿಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳೆ ಹಾಳಾಗಿದೆ. ಕಂದನಕೋವಿ ಗ್ರಾಮವೊಂದರಲ್ಲೇ ಈಡಿಗರ ರುದ್ರೇಶ್‌, ಹನುಮಂತಪ್ಪ, ದೇವೇಂದ್ರಪ್ಪ, ಅಂಜಿನಪ್ಪ ಸೇರಿದಂತೆ 300 ಎಕರೆ ಪ್ರದೇಶದಲ್ಲಿ ರೈತರು ಬಿತ್ತಿದ ಬೀಜ ಕಾಯಿಬಿಟ್ಟಿಲ್ಲ. ಇದರಿಂದಾಗಿ ಸರಾಸರಿ ರೂ 150ರಿಂದ 200 ಕೋಟಿ ನಷ್ಟವಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ ಕೃಷಿ ಇಲಾಖೆ ಈ ಬಾರಿ 35 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಿತ್ತು. ಆದರೆ, ಸಾಧನೆ ಆಗಿರುವುದು ಕೇವಲ 17,327 ಹೆಕ್ಟೇರ್‌ ಮಾತ್ರ. ತಾಲ್ಲೂಕಿನಲ್ಲಿ ಕೇವಲ 1,267 ಹೆಕ್ಟೇರ್‌ ಬಿತ್ತನೆಯಾಗಿದೆ. ಅದಲ್ಲೇ ಶೇ 50ರಷ್ಟು ಹತ್ತಿ ಕಳಪೆಯಾಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಕೃಷಿ ಸಚಿವ ಕೃಷ್ಣ ಭೈರೇಗೌಡರಿಗೆ ಈಚೆಗೆ ಮನವಿ ಸಲ್ಲಿಸಿದ್ದೆವು. ಆದರೆ, ಅವರು ಸ್ಥಳ ಪರಿಶೀಲನೆ ನಡೆಸದೇ ತಜ್ಞದಿಂದ ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದಾರೆ. ತಜ್ಞರು, ಕೃಷಿ ಇಲಾಖೆ ಅಧಿಕಾರಿಗಳು ಯಾವಾಗಲೂ ಕಂಪೆಯ ಪರ ಇರುತ್ತಾರೆ. ಅವರಿಗೆ ಅವರಿಂದ ಲಾಭವಿದೆ. ರೈತರಿಂದ ಅವರಿಗೆ ಏನು ಲಾಭವಿಲ್ಲ ಎಂದು ಆರೋಪಿಸಿದರು.

ರೈತ ಮುಖಂಡರಾದ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಈಚಘಟ್ಟ ರುದ್ರೇಶ್‌, ಪಾಮೇನಹಳ್ಳಿ ತೀರ್ಲಪ್ಪ,
ಲಿಂಗರಾಜ್‌, ಸುರೇಶ್‌, ರುದ್ರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.