ADVERTISEMENT

ಕಾವೇರಿಗಾಗಿ ಕರವೇ ಉರುಳು ಸೇವೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 5:10 IST
Last Updated 1 ಅಕ್ಟೋಬರ್ 2012, 5:10 IST
ಕಾವೇರಿಗಾಗಿ ಕರವೇ ಉರುಳು ಸೇವೆ
ಕಾವೇರಿಗಾಗಿ ಕರವೇ ಉರುಳು ಸೇವೆ   

ದಾವಣಗೆರೆ: ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ದಶಕಗಳಿಂದ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾನುವಾರ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ ಬಣ) ಕಾರ್ಯಕರ್ತರು ಉರುಳುಸೇವೆ ನಡೆಸಿ ಪ್ರತಿಭಟಿಸಿದರು.

ನಗರದ ಜಯದೇವವೃತ್ತದಿಂದ ಆರಂಭವಾದ ಮೆರವಣಿಗೆ ಗಾಂಧಿ ವೃತ್ತಕ್ಕೆ ತಲುಪಿತು. ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ನಡೆಸಿ, ಕೆಲಕಾಲ ಉರುಳುಸೇವೆ ಮಾಡಿದರು. ನಂತರ ತಲೆ ಮೇಲೆ ಕಲ್ಲುಚಪ್ಪಡಿ ಇಟ್ಟುಕೊಂಡು ಸಾಂಕೇತಿಕವಾಗಿ ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಅಧ್ಯಕ್ಷ ಕೆ.ಜಿ. ಯಲ್ಲಪ್ಪ ಮಾತನಾಡಿ, ಇಡೀ ರಾಜ್ಯವೇ ಇಂದು ಬರದಿಂದ ಬಳಲುತ್ತಿದೆ. ನಮಗೇ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಮಾಡಲು ಹೇಗೆ ಸಾಧ್ಯ? ಈ ಕುರಿತು ರಾಜ್ಯ ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಆದೇಶ ಮರುಪರಿಶೀಲಿಸಲು ಅರ್ಜಿ ಸಲ್ಲಿಸಬೇಕು. ಕಾವೇರಿ ನದಿ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದ ಅನ್ನದಾತನ ಮೇಲೆ ಕಲ್ಲುಚಪ್ಪಡಿ ಎಳೆದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇಂದ್ರಕ್ಕೆ ರಾಜ್ಯದ ವಾಸ್ತವ ಅಂಶಗಳನ್ನು ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ಬರಗಾಲದಿಂದ ಹಲವು ಜಿಲ್ಲೆಗಳಲ್ಲಿ ಜನ-ಜಾನುವಾರು ನೀರಿಗಾಗಿ ತತ್ತರಿಸುತ್ತಿದ್ದಾರೆ. ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಎಸ್. ಶ್ರೇಯಸ್, ಬಿ. ರುದ್ರೇಶ್, ಪ್ರಭಾವ್ ಕಾಮತ್, ನಾಗರಾಜಗೌಡ, ನವೀನ್ ಅಂದನೂರು, ಚಿದಂಬರ, ಅಮ್ಜದ್ ಅಲಿ, ಲಿಂಗರಾಜ, ಬಸವರಾಜ ಹುಡೇರಿ, ತಿಮ್ಮಪ್ಪ ಪೂಜಾರ್, ಆರಿಫ್, ನೂರ್ ಅಹಮ್ಮದ್, ಸ್ಟಾರ್ ಖಲೀಲ್, ಸಿಕಂದರ್, ಅಬ್ದುಲ್‌ಸಮದ್, ಕೆ.ಎಚ್. ಮೆಹಬೂಬ್, ಅಕ್ಬರ್ ಬಿಲಾಲ್, ಲಕ್ಷ್ಮಣರಾವ್ ಸೋಲಂಕಿ, ಮೊಹಿಯುದ್ದೀನ್ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.