ಬಸವಾಪಟ್ಟಣ: ಕೆರೆಬಿಳಚಿ ಹೋಬಳಿಗೆ ಸುಮಾರು ರೂ 12.18 ಕೋಟಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಬುಧವಾರ ಕೆರೆಬಿಳಚಿಯಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹೋಬಳಿಯಲ್ಲಿ ಕುಡಿಯುವ ನೀರಿಗೆ ರೂ 11.05 ಕೋಟಿ ರಸ್ತೆ ನಿರ್ಮಾಣಕ್ಕೆ ರೂ 50 ಲಕ್ಷ, ಗ್ರಾಮಗಳ ಕಾಂಕ್ರೀಟ್ ರಸ್ತೆಗಳಿಗೆ ರೂ 40 ಲಕ್ಷ, ಮಸೀದಿಗಳಿಗೆ ರೂ 18 ಲಕ್ಷ ಸ್ತ್ರೀಶಕ್ತಿ ಸಂಘಗಳಿಗೆ ರೂ1.25, ಸರ್ವಶಿಕ್ಷಾ ಅಭಿಯಾನಕ್ಕೆರೂ5 ಲಕ್ಷ ಕಾಮಗಾರಿ ಆಗಿದ್ದು, ಹೋಬಳಿಯ 271 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ತಲಾ 75 ಸಾವಿರ ರೂಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೇ, ಕೆರೆಬಿಳಚಿಗೆ 66 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪವರ್ ಸ್ಟೇಷನ್ ಮತ್ತು ಎರಡು ಅಂಗನವಾಡಿಗಳನ್ನು ಮಂಜೂರು ಮಾಡಲಾಗಿದೆ ಎಂದು ವಿರೂಪಾಕ್ಷಪ್ಪ ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದೆ. ಗಾಂಧೀಜಿ ಕಂಡ ಕನಸನ್ನು ನನಸು ಮಾಡುವಲ್ಲಿ ಬಿಜೆಪಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಜಾತಿ ಭೇದವಿಲ್ಲದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗತ್ಯ ಸೌಲಭ್ಯ ದೊರೆಯುವಂತೆ ಮಾಡಿ ಜನಮನ್ನಣೆ ಗಳಿಸಿದೆ ಎಂದರು.
ತಾ.ಪಂ. ಅಧ್ಯಕ್ಷ ಕೆ.ಜಿ. ಮರುಳಸಿದ್ದಪ್ಪ, ಮೊಹ್ಮದ್ ಷರೀಫ್, ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ, ಗ್ರಾ.ಪಂ. ಸದಸ್ಯ ನಾಸಿರ್‌ಜಾನ್ ಮಾತನಾಡಿದರು. ಉಪ ತಹಶೀಲ್ದಾರ್ ಶಶಿಧರ್ ಸ್ವಾಗತಿಸಿದರು. ಜಯರಾಮನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.