ADVERTISEMENT

`ಕ್ರೀಡೆಯಿಂದ ಆರೋಗ್ಯ ವೃದ್ಧಿ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:21 IST
Last Updated 6 ಜೂನ್ 2013, 5:21 IST

ದಾವಣಗೆರೆ: ಆಟೋಟಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ಹೇಳಿದರು.
ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯು, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ನಗರದ ಎಸ್.ಎಸ್.ಬಡಾವಣೆಯ `ಬಿ' ಬ್ಲಾಕ್‌ನಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ `ಲಿ-ನಿಂಗ್ ಫೈವ್ ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ' ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಉತ್ತಮ ಹವ್ಯಾಸ. ಇದರಿಂದ ಕ್ರೀಡಾ ಮನೋಭಾವ ಬೆಳೆಯುವ ಜತೆಗೆ, ತಂಡಸ್ಫೂರ್ತಿ ಸಹ ಬರುತ್ತದೆ. ಈಜು, ಬ್ಯಾಡ್ಮಿಂಟನ್, ಕ್ರಿಕೆಟ್, ಬ್ಯಾಸ್ಕೆಟ್‌ಬಾಲ್... ಹೀಗೆ ಆಸಕ್ತಿ ಇರುವ ಆಟಗಳಲ್ಲಿ ಮಕ್ಕಳು ತೊಡಗಿ ಕೊಳ್ಳಬೇಕು; ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.

ನಗರದಲ್ಲಿ 2011ರಲ್ಲಿ ಅಖಿಲ ಭಾರತ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ ನಡೆದಿತ್ತು. ಈಚೆಗಷ್ಟೇ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿ ನಡೆಸಿದೆವು. ಒಟ್ಟಾರೆ ನಗರದಲ್ಲಿ ಕ್ರೀಡಾ ಚಟುವಟಿಕೆಗಳು ಜಾಸ್ತಿ ನಡೆಯುತ್ತಿವೆ. ಇಂಥ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಬೆಂಬಲ ಇರುತ್ತದೆ ಎಂದರು.

ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಇಂತಹ ಟೂರ್ನಿಗಳು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಇಲ್ಲಿಯೂ ಸಂಘಟಿಸಲಾಗುತ್ತಿದೆ. ಇದರೊಂದಿಗೆ ದಾವಣಗೆರೆಯು ಕ್ರೀಡಾ ನಕ್ಷೆಯಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.

ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ; ಭಾಗವಹಿಸುವುದು ಮುಖ್ಯ. ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವವಿದೆ. ಕ್ರೀಡಾ ಕೋಟಾದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳಿರುತ್ತವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ತರಬೇತುದಾರರ ಕೊರತೆ ಇದೆ. ಈ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ತರಬೇತುದಾರರ ನೇಮಕಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ಎನ್.ಸಿ.ಸುಧೀರ್, ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೆ.ಬಿ.ಉಮೇಶ್, ಸಂಘಟನಾ ಕಾರ್ಯದರ್ಶಿ ಇ.ಎಸ್. ಚಂದ್ರಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.