ADVERTISEMENT

ಡಿಸಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 5:45 IST
Last Updated 28 ಜನವರಿ 2012, 5:45 IST

ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಶೀಘ್ರ ಮಂಜೂರಾತಿಗೆ ಆಗ್ರಹಿಸಿ ಜ. 28ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ಆರ್ಥಿಕವಾಗಿ ಸಂಕಷ್ಟದಲ್ಲಿರುವ 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಯೋಜನೆ, ವಿಧವೆಯರಿಗೆ ವಿಧವಾ ವೇತನ ಹಾಗೂ ಅಂಗವಿಕಲರಿಗೆ ವೇತನ ನೀಡುವ ಯೋಜನೆಗಳನ್ನು ಜಾರಿಗೆ ತಂದರು. ಈಗಲೂ ಕೇಂದ್ರ ಸರ್ಕಾರ ಈ ಯೋಜನೆಗಳಿಗಾಗಿ ನೂರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಆದರೆ, ಜಿಲ್ಲೆಯಲ್ಲಿ 8 ತಿಂಗಳಿಂದ ವೇತನ ಮಂಜೂರಾತಿ ರದ್ದುಗೊಳಿಸಲಾಗಿದ್ದು, ಈ ಫಲಾನುಭವಿಗಳಿಗೆ ಪಿಂಚಣಿ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ 20 ಸಾವಿರ ಫಲಾನುಭವಿಗಳು ಪಿಂಚಣಿ ನಿರೀಕ್ಷೆಯಲ್ಲಿದ್ದಾರೆ. ಅಧಿಕಾರಿಗಳು ಅರ್ಜಿಗಳ ಪರಿಶೀಲನೆ ನೆಪದಲ್ಲಿ ಅಸಮಂಜಸ ಕಾರಣಗಳನ್ನು ನೀಡುತ್ತಿದ್ದಾರೆ.
 
ಆದರೆ, ಬಡಜನರು ಪ್ರಯೋಜನ ದೊರೆಯದೇ ಕಷ್ಟದಲ್ಲಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎರಡು ತಿಂಗಳ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು. ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪಿ. ರಾಜಕುಮಾರ್, ಎ. ನಾಗರಾಜ್, ಎ.ಎಸ್. ಮೃತ್ಯುಂಜಯ, ಪಾಲಿಕೆ ವಿರೋಧ ಪಕ್ಷದ ನಾಯಕ ಡಿ.ಎನ್. ಜಗದೀಶ್, ಎಸ್. ಮಲ್ಲಿಕಾರ್ಜುನ, ಮಹಾದೇವಮ್ಮ ಮಲ್ಲಿಕಾರ್ಜುನಪ್ಪ, ವಿನಾಯಕ ಪೈಲ್ವಾನ್, ಅಯೂಬ್ ಪೈಲ್ವಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.