ADVERTISEMENT

ತಲ್ಲಣಗೊಂಡ ‘ಅಡಿಕೆ ನಾಡು’

ಅಡಿಕೆ ನಿಷೇಧ ಪ್ರಸ್ತಾವ: ಬೆಳೆಗಾರರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 5:59 IST
Last Updated 14 ಡಿಸೆಂಬರ್ 2013, 5:59 IST

ಚನ್ನಗಿರಿ:  ತಾಲ್ಲೂಕಿನ ಅಡಿಕೆ ಬೆಳೆಗಾರರು ಐದು ವರ್ಷಗಳಿಂದ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.  ಈಗ ಇಡೀ ಅಡಿಕೆ ಬೆಳೆಯನ್ನೇ ನಿಷೇಧ ಮಾಡಬೇಕು ಎಂಬ ಕೇಂದ್ರ ಸರ್ಕಾರದ ಪ್ರಸ್ತಾವದಿಂದ ‘ಅಡಿಕೆಯ ನಾಡು’ ಸಂಪೂರ್ಣವಾಗಿ ತಲ್ಲಣಗೊಳ್ಳುವಂತೆ ಮಾಡಿದೆ.

ಅಡಿಕೆ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ. ಸುಮಾರು 30 ಸಾವಿರಕ್ಕಿಂತಲೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ಅರೆ ಮಲೆನಾಡಿನ ‘ಅಡಿಕೆ ನಾಡು’ ಎಂದು ಪ್ರಸಿದ್ಧಿ ಪಡೆದಿದೆ. ಅಡಿಕೆಯಲ್ಲಿ ಹಾನಿಕಾರಕ ಹಾಗೂ ವಿಷಕಾರಕ ಅಂಶಗಳಿವೆ ಎಂದು ಕೇಂದ್ರ ಸರ್ಕಾರ ಪ್ರತಿಬಿಂಬಿಸಿ ಇಡೀ ಅಡಿಕೆ ಬೆಳೆಯನ್ನೇ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಪ್ರಸ್ತಾವವನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಇದು ತಾಲ್ಲೂಕಿನಲ್ಲಿ ಬಹು ಚರ್ಚೆಯ ವಿಷಯವಾಗಿ ಎಲ್ಲೆಂದರಲ್ಲಿ ಚರ್ಚೆ ನಡೆಯುವಂತಾಗಿದೆ. ಅಡಿಕೆ ಬೆಳೆಯನ್ನು ನಿಷೇಧ ಮಾಡುವುದರಿಂದ ಕೇವಲ ಅಡಿಕೆ ಬೆಳೆಗಾರರು ಮಾತ್ರ ಬೀದಿಗೆ ಬೀಳುವುದಷ್ಟೇ ಅಲ್ಲದೇ ಈ ಬೆಳೆಯನ್ನೇ ನಂಬಿಕೊಂಡು ಜೀವನ ನಿರ್ವಹಿಸುವ ಸಹಸ್ರಾರು ಕೂಲಿ ಕಾರ್ಮಿಕರು ಕೂಡಾ ಕೆಲಸ ಇಲ್ಲದೇ ಬೀದಿಗೆ ಬೀಳುವಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಲು ಹೊರಟಿರುವುದು ಅಡಿಕೆ ಬೆಳೆಗಾರರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

ಹಲವಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಸಹಸ್ರಾರು ಎಕರೆಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ತಾಲ್ಲೂಕು ಒಂದರಲ್ಲಿಯೇ ಅಡಿಕೆಯಿಂದ ಪ್ರತಿವರ್ಷ ಸುಮಾರು ₨ 900 ಕೋಟಿಗಿಂತಲೂ ಹೆಚ್ಚು ವಹಿವಾಟು ವಿವಿಧ ಅಡಿಕೆ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಈಗ ಕೇಂದ್ರ ಸರ್ಕಾರ, ಅಡಿಕೆ ಬೆಳೆಗಾರ ರಕ್ಷಣೆಗೆ ಧಾವಿಸದೇ ಇಡೀ ಅಡಿಕೆ ಬೆಳೆಯನ್ನೇ ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಪ್ರಸ್ತಾವವನ್ನು ಕೋರ್ಟ್‌ಗೆ ಸಲ್ಲಿಸಿರುವುದು ಅಡಿಕೆ ಬೆಳೆಗಾರರ ಮೇಲೆ ಯುದ್ಧವನ್ನು ಮಾಡಲು ಹೊರಟಂತಿದೆ.

ಇದರಿಂದ ಸಹಸ್ರಾರು ಅಡಿಕೆ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಇದು ಸರಿಯಾದ ಕ್ರಮವಲ್ಲ. ಅಡಿಕೆ ಬೆಳೆ ನಿಷೇಧ ಮಾಡುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ನಡೆಸಲಾಗುವುದು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿ.ಆರ್‌.ತಿಪ್ಪೇಶಪ್ಪ ಎಚ್ಚರಿಸಿದರು.
–ಎಚ್‌.ವಿ. ನಟರಾಜ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.