ADVERTISEMENT

ನಾನೂ ಧರ್ಮಸ್ಥಳಕ್ಕೆ ತೆರಳುವೆ: ಎಂಪಿಆರ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 6:10 IST
Last Updated 22 ಜೂನ್ 2011, 6:10 IST

ಹೊನ್ನಾಳಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಧರ್ಮ, ಸಂಸ್ಕೃತಿ, ಮಠ-ಮಾನ್ಯಗಳಲ್ಲಿ ನಂಬಿಕೆ ಇದೆ. ಬಿಜೆಪಿ ಎಲ್ಲಾ ವರ್ಗದವರ ಅಭಿವೃದ್ಧಿಗಾಗಿ ಜಾತ್ಯತೀತವಾಗಿ ಕೆಲಸ ಮಾಡುತ್ತಿದೆ. ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಜೂನ್ 27ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ತಾವೂ ತೆರಳುವುದಾಗಿ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ದೇವೇಗೌಡ ಮತ್ತವರ ಕುಟುಂಬದವರು ಅವಕಾಶವಾದಿಗಳು. ಒಂದು ಸುಳ್ಳನ್ನು ಹತ್ತು ಬಾರಿ ಹೇಳಿ ಅದನ್ನೇ ನಿಜ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
 
ಹಾಗಾಗಿ, ಎಲ್ಲವೂ ಒಮ್ಮೆ ಮಂಜುನಾಥನ ಸನ್ನಿಧಿಯಲ್ಲಿ ನಿರ್ಣಯವಾಗಲಿ ಎಂಬ ಉದ್ದೇಶದಿಂದ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಆಣೆ-ಪ್ರಮಾಣದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಪ್ರಸ್ತುತ ರಾಜಕಾರಣದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಜೆಡಿಎಸ್‌ನವರು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ನಿರ್ವಹಿಸುವುದನ್ನು ಬಿಟ್ಟು ಬಾಲಿಶವಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ದೇವೇಗೌಡ ಅವರು ಕೀಳುಮಟ್ಟದ ರಾಜಕಾರಣ ಮಾಡುವ ಬದಲು ರಾಜಕೀಯದಿಂದ ನಿವೃತ್ತರಾಗುವುದು ಒಳಿತು ಎಂದು ಸಲಹೆ ನೀಡಿದ ರೇಣುಕಾಚಾರ್ಯ, ಮಾಜಿ ಪ್ರಧಾನಿಯಾಗಿ ತಮ್ಮ ಅನುಭವವನ್ನು ಇತರರಿಗೆ ಧಾರೆ ಎರೆಯಲಿ. ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದು ತಿಳಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಬೀದಿಬದಿ ಆರೋಪ ಮಾಡುತ್ತಾ ಕಾಲ ನೂಕುತ್ತಿದ್ದಾರೆ. ವಿಧಾನಸಭಾ ಅಧಿವೇಶನ ಕರೆದರೆ ಬಹಿಷ್ಕರಿಸುತ್ತಾರೆ. ಸರ್ಕಾರದ ವಿರುದ್ಧ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ನೀಡಲಿ. ಇಲ್ಲವೇ ಸೂಕ್ತ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

`ಸುವರ್ಣಭೂಮಿ~ ಯೋಜನೆಯಡಿ ಸರ್ಕಾರ ರಾಜ್ಯದ ರೈತರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದೆ. ಎಲ್ಲಾ ಅರ್ಹ ಬಡ ರೈತರಿಗೂ ಯೋಜನೆಯ ಸೌಲಭ್ಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ತುಂಗಾ ಮೇಲ್ದಂಡೆ ಯೋಜನೆಯಡಿ ಎಸ್‌ಸಿ,ಎಸ್‌ಟಿ ಕಾಲೊನಿಗಳ ಅಭಿವೃದ್ಧಿಗೆ ್ಙ 14ಕೋಟಿ ಬಿಡುಗಡೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಸಿ-ಎಸ್‌ಟಿ ಕಾಲೊನಿಗಳ ಅಭಿವೃದ್ಧಿಗೆ  ್ಙ 1.10ಕೋಟಿ ಬಿಡುಗಡೆ ಮಾಡಲಾಗಿದೆ. ಆರಾಧನಾ ಯೋಜನೆಯಡಿ ದೇವಾಲಯಗಳ ಜೀರ್ಣೋದ್ಧಾರಕ್ಕೆ ್ಙ 10ಲಕ್ಷ ನೀಡಲಾಗಿದೆ. ಮಸೀದಿ-ದರ್ಗಾಗಳಿಗೆ ಒಟ್ಟು ್ಙ 20ಲಕ್ಷ ಬಿಡುಗಡೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ್ಙ 10ಲಕ್ಷ, ಭದ್ರಾ ಉಪ ನಾಲಾ ರಸ್ತೆಗಳ ಅಭಿವೃದ್ಧಿಗೆ ್ಙ 3.80ಕೋಟಿ ಬಿಡುಗಡೆ ಮಾಡಲಾಗಿದೆ ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.