ADVERTISEMENT

ಪಟ್ಟಣದ ಅಭಿವೃದ್ಧಿಗೆ ₹ 18.50 ಕೋಟಿ: ವಡ್ನಾಳ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 6:30 IST
Last Updated 17 ಅಕ್ಟೋಬರ್ 2017, 6:30 IST

ಚನ್ನಗಿರಿ: ಇದುವರೆಗೆ ಯಾವ ಶಾಸಕರೂ ತರದಷ್ಟು ಅನುದಾನವನ್ನು ಪಟ್ಟಣದ ಅಭಿವೃದ್ಧಿಗೆ ತರಲಾಗಿದೆ. ಸರ್ವತೋಮುಖ ಅಭಿವೃದ್ಧಿಗೆ ₹ 18.50 ಕೋಟಿ ಅನುದಾನವನ್ನು ಈ ಅವಧಿಯಲ್ಲಿ ತರಲಾಗಿದೆ ಎಂದು ಶಾಸಕ ವಡ್ನಾಳ್ ರಾಜಣ್ಣ ತಿಳಿಸಿದರು

ಪಟ್ಟಣದ ಮೌದ್ಗಲ್ ಆಂಜನೇಯಸ್ವಾಮಿ ಸಮುದಾಯ ಭವನದ ರಸ್ತೆಯಲ್ಲಿ ಪುರಸಭೆಯಿಂದ ಸೋಮವಾರ ನಡೆದ 2015–16ನೇ ಸಾಲಿನ ವಿಶೇಷ ಅನುದಾನದ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ವಿಶೇಷ ಅನುದಾನದ ಅಡಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲೂ ಡಾಂಬರು ರಸ್ತೆ ನಿರ್ಮಿಸಲಾಗುವುದು. ಮುಂದಿನ ವಾರ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ₹ 3 ಕೋಟಿಯ ಕಾಮಗಾರಿ ಆರಂಭಿಸಲಾಗುವುದು.

ADVERTISEMENT

ಈ ಅನುದಾನದಲ್ಲಿ ಮತ್ತೆ ಪಟ್ಟಣದಲ್ಲಿ ಏಳು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು. ನವಂಬರ್‌ನಲ್ಲಿ ನಗರೋತ್ಥಾನ ಯೋಜನೆ ಅಡಿ ₹ 7.5 ಕೋಟಿ ಅನುದಾನ ಮಂಜೂರಾಗಿದ್ದು, ಆಗ ಕಾಮಗಾರಿ ಆರಂಭಿಸಲಾಗುವುದು. ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ₹ 5 ಕೋಟಿ ಅನುದಾನ ಈಗಾಗಲೇ ಮಂಜೂರಾಗಿದೆ. ಸಾರ್ವಜನಿಕ ಚಿತಾಗಾರ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹ 10 ಲಕ್ಷ ನೀಡಲಾಗಿದೆ ಎಂದರು.

ತಾಂತ್ರಿಕ ಸಮಸ್ಯೆಗಳಿಂದಾಗಿ ತಡವಾಗಿ ಕಾಮಗಾರಿ ಆರಂಭಿಸಲಾಗಿದೆ. ಈಗ ನಿಗದಿತ ಅವಧಿಯೊಳಗೆ ಈ ಎಲ್ಲಾ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಗುತ್ತಿಗೆದಾರರು ನಿರ್ವಹಿಸಬೇಕು. ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕೈಗೊಳ್ಳಲು ಅಗತ್ಯ ಅನುದಾನ ಆದಷ್ಟು ಶೀಘ್ರವೇ ಬಿಡುಗಡೆಯಾಗಲಿದೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಬೇಕು ಎಂದು ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಬಿ.ಆರ್. ಹಾಲೇಶ್, ಉಪಾಧ್ಯಕ್ಷ ಸುನೀತಾ ಗಣೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ. ರವಿಕುಮಾರ್, ಸದಸ್ಯರಾದ ಕೆ.ಆರ್. ಮಾಲತೇಶ್, ರುದ್ರಯ್ಯ, ರಾಮಚಂದ್ರ ಪ್ರಜಾಪತ್, ಶಿವರತ್ನಮ್ಮ, ಸವಿತಾ, ಗುಲ್ಜಾರ್‌ಬಾನು, ಶಿವಕುಮಾರ್, ಅಸ್ಲಾಂಬೇಗ್, ಜಬೀವುಲ್ಲಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಆರ್. ಮಂಜುನಾಥ್, ನಿರ್ದೇಶಕ ವಿಜಯಕುಮಾರ್ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಟಿ. ಜಯ್ಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.