ADVERTISEMENT

ಬಂಧಮುಕ್ತರಾಗಲು ಶೈಕ್ಷಣಿಕ ಸಂಸ್ಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 3:40 IST
Last Updated 22 ಅಕ್ಟೋಬರ್ 2012, 3:40 IST

ಹರಪನಹಳ್ಳಿ: ದಲಿತ, ಹಿಂದುಳಿದ ಹಾಗೂ ದುರ್ಬಲ ವರ್ಗಗಳ ಶೋಷಿತ ಸಮುದಾಯಗಳು ಶೈಕ್ಷಣಿಕ ಸಂಸ್ಕಾರ ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯತ್ತ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಇದೆ ಎಂದು ಬೆಂಗಳೂರಿನ ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನದ ಪೀಠಾಧಿಪತಿ ರೇಣುಕಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ಆರ್ಯ ಈಡಿಗರ ಸಂಘದ ತಾಲ್ಲೂಕು ಘಟಕದ ಹಮ್ಮಿಕೊಂಡಿದ್ದ ಸಮಾವೇಶ ಉದ್ಘಾಟಿಸಿದ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಮನುಷ್ಯನಲ್ಲಿ ಆಚಾರ, ವಿಚಾರ, ವಿವೇಕತನ ಹಾಗೂ ಸದ್ಗುಣಗಳ ಸಂಸ್ಕೃತಿಯ ಸಿರಿವಂತಿಕೆ ಮೊಳಕೆಯೊಡೆಯಲು ಶೈಕ್ಷಣಿಕ ಸಂಸ್ಕಾರದ ದೀಕ್ಷೆ ಅವಶ್ಯ. ಜತೆಗೆ, ಸಮಾಜದ ಸಂಘಟನೆಯೂ ಅತ್ಯಗತ್ಯ. ಶಿಕ್ಷಣ ಮನುಷ್ಯನ ಮನಸ್ಸನ್ನು ಸ್ವತಂತ್ರೀಕರಣಗೊಳಿಸಿದರೆ, ಸಂಘಟನೆ ಸಮುದಾಯದ ಶಕ್ತಿ ಹಾಗೂ ಬಲವರ್ಧನೆಯನ್ನು ಬಿಂಬಿಸುತ್ತದೆ. ಹೀಗಾಗಿ, ಶೋಷಿತ ಸಮುದಾಯಗಳು ಸುಶಿಕ್ಷಿತರಾಗುವ ಮೂಲಕ ಸಂಘಟಿತ ಹೋರಾಟ ರೂಪಿಸಬೇಕು. ಅಸಂಘಟಿತ ಸಮುದಾಯಗಳು ಶೋಷಣೆಯ ಬಂಧನದಿಂದ ಮುಕ್ತಿಹೊಂದಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಕೌಟುಂಬಿಕ ಬದುಕಿನಲ್ಲಿ ಸಂಸಾರದ ರಥ ಸಾಗಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ನಾವು ತೊಡಗಿಸಿಕೊಂಡಿರುವ ಕಾಯಕದಿಂದ ಗಳಿಸಿದ ಸಂಪತ್ತಿನ ಕೆಲ ಭಾಗವನ್ನು, ಶೋಷಿತ ಸಮುದಾಯಗಳ ಸಂಕಷ್ಟ ನಿವಾರಣೆಗೆ ವಿನಿಯೋಗಿಸುವಂತಹ ಸೇವಾ ಮನೋಭಾವ ನಮ್ಮಲ್ಲಿ ಅರಳಬೇಕು. ಅಂತಹ ಮನೋಭಾವದ ವ್ಯಕ್ತಿತ್ವವುಳ್ಳ ಮನುಷ್ಯ ಸಮಾಜದಲ್ಲಿ ಅಮರನಾಗುತ್ತಾನೆ ಎಂದರು.

ರಾಜ್ಯದ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕಾಗಿ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣವನ್ನು, ಆಳುವ ದೊರೆಗಳು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದು, ಕೆಲವೇ ಕೆಲ ಜನ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಕೊಳ್ಳೆಬಾಕ ಸಂಸ್ಕೃತಿಯ ಜನ ನಮ್ಮನ್ನು ಆಳುತ್ತಿರುವ ಪರಿಣಾಮ, ಗ್ರಾಮೀಣ ಪ್ರದೇಶದ ಎಷ್ಟೋ ಹಳ್ಳಿಗಳಿಗೆ ಇನ್ನೂ ಮೂಲಸೌಕರ್ಯಗಳು ಗಗನ ಕುಸುಮವಾಗಿವೆ ಎಂದು ವಿಷಾದಿಸಿದರು.

ಸಾಮಾಜಿಕ ಸುಧಾರಣಾ ಚಳವಳಿ ಆರಂಭಿಸುವ ಮೂಲಕ ಕೇರಳದಲ್ಲಿ ಸಮಾನತೆಗಾಗಿ ಹೋರಾಡಿದ ಸಂತ, ಮಹಾನ್ ಮಾನವತಾವಾದಿ ನಾರಾಯಣ ಗುರು ಅವರ ಜಯಂತಿಯನ್ನು ಸಾರ್ವತ್ರಿಕ ರಜೆ ಘೋಷಿಸಿ, ಸರ್ಕಾರದ ನೇತೃತ್ವದಲ್ಲಿ ಆಚರಿಸಬೇಕು ಎಂದು ಒತ್ತಾಯಿಸಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಈ. ದುರುಗಪ್ಪ ಅಧ್ಯಕ್ಷತೆ ವಹಿಸಿದ್ದರು. ಆರ್ಯ ಈಡಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಶಂಕರ್, ಹಿರಿಯ ಉಪಾಧ್ಯಕ್ಷರಾದ ಶಾಂತರಾಮ್, ಈ. ದೇವದಾಸ್, ಪ್ರಧಾನ ಕಾರ್ಯದರ್ಶಿ ಎ. ನಾಗರಾಜ, ಖಜಾಂಚಿ ವಿ. ರವೀಂದ್ರಬಾಬು, ಸಹ ಕಾರ್ಯದರ್ಶಿ ಭರಮಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಜಗದೀಶಗೌಡ, ದಾವಣಗೆರೆ ರೇಣುಕಾಂಬಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ದೇವೇಂದ್ರಪ್ಪ ಉಪಸ್ಥಿತರಿದ್ದರು.

ಕು. ನಿಶ್ಚಿತ ಮತ್ತು ತ್ರಿವೇದಿ ಪ್ರಾರ್ಥಿಸಿದರು. ಈ. ವೆಂಕಟೇಶ್ ಪ್ರಾಸ್ತಾವಿಕ ಮಾತನಾಡಿದರು. ಈ. ಉಮೇಶ್ ಸ್ವಾಗತಿಸಿದರು. ಕೊಟ್ರಯ್ಯ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.