ADVERTISEMENT

ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:40 IST
Last Updated 19 ಸೆಪ್ಟೆಂಬರ್ 2011, 9:40 IST

ದಾವಣಗೆರೆ: ತಾಲ್ಲೂಕು ಬಗರ್‌ಹುಕುಂ ಸಕ್ರಮೀಕರಣ ಸಮಿತಿಯ ಮೂರನೇ ಸಭೆ ಈಚೆಗೆ ನಗರದಲ್ಲಿ ನಡೆಯಿತು.ದಾವಣಗೆರೆ ತಾಲ್ಲೂಕು ಮಾಯಕೊಂಡ ಮತ್ತು ಆನಗೋಡು ಹೋಬಳಿಯಲ್ಲಿರುವ ಸೇಂದಿ ಖರಾಬು ಸಂಬಂಧ ಸುಮಾರು 285ಅರ್ಜಿಗಳು ಬಂದಿದ್ದು, ಸಮಿತಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದೆ.

ಅಲ್ಲದೇ, ಸಂಬಂಧಿಸಿದ ರಾಜಸ್ವ ನಿರೀಕ್ಷಕ ಮತ್ತು ಉಪ ತಹಶೀಲ್ದಾರ್ ಅವರಿಂದ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು ಎಂದು ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಸುತ್ತೋಲೆ ಮತ್ತು ಹೈಕೋರ್ಟ್ ಆದೇಶದಂತೆ ಪ್ರಸ್ತುತ ಯಾವುದೇ ಗೋಮಾಳ, ಗಾಯಾರಾಣ, ಹುಲ್ಲುಬನ್ನಿ ಖರಾಬುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಶೀಲಿಸಬಾರದು ಎಂದು ಆದೇಶವಿದೆ. ಹಾಗಾಗಿ, ಕೇವಲ ಸೇಂದಿ ಖರಾಬಿನಲ್ಲಿ ಇರುವ ಜಮೀನನ್ನು ಮಂಜೂರು ಮಾಡಲು ಅವಕಾಶ ಇರುವುದರಿಂದ ಸಮಿತಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದೆ ಎಂದು ಅವರು ಹೇಳಿದ್ದಾರೆ.

ಏ. 30, 1999ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಮಾತ್ರ ಪರಿಶೀಲಿಸಬಹುದಾಗಿದ್ದು, ಅರ್ಜಿದಾರರು ತಾವೇ ಸಾಗುವಳಿ ಮಾಡುತ್ತಿರುವ ಬಗ್ಗೆ ಮತ್ತು ಇತರ ಮಾಹಿತಿ ಪಡೆದುಕೊಳ್ಳಲು ಸಮಿತಿ ಸ್ಥಳ ತನಿಖೆ ಮಾಡಬೇಕಾಗಿದೆ.

ಹಾಗಾಗಿ, ಸಮಿತಿಯ ಅಧ್ಯಕ್ಷ ಸೆ. 26ರಂದು ಅರ್ಜಿ ಬಂದಿರುವ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡುವರು. ಆಗ ಅರ್ಜಿದಾರರು ಸ್ಥಳದಲ್ಲೇ ಹಾಜರಿದ್ದು, ತಮ್ಮಲ್ಲಿರುವ ದಾಖಲಾತಿಗಳನ್ನು ಹಾಜರು ಪಡಿಸಬೇಕು ಎಂದು ಸಮಿತಿ ಸೂಚಿಸಿತು.

ಸ್ಥಳ ತನಿಖೆ ಮಾಡಿದ ನಂತರ ಕಾನೂನು ಬದ್ಧವಾಗಿ ಭೂ ಮಂಜೂರಾತಿ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ. ಬಸವರಾಜ ನಾಯ್ಕ, ಸದಸ್ಯರಾದ ಮಾಲತೇಶ್, ಮಂಜುಳಾ, ಹನುಮಂತ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT