ADVERTISEMENT

ಬಡವರಿಗೂ ವೈದ್ಯಕೀಯ ಸೇವೆ ಸಿಗಲಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 4:40 IST
Last Updated 21 ಜೂನ್ 2012, 4:40 IST

ದಾವಣಗೆರೆ: ಅತ್ಯಾಧುನಿಕ ವೈದ್ಯಕೀಯ ಸೇವೆ ಬಡವರಿಗೂ ಸಿಗುವಂತಾದಾಗ ಮಾತ್ರ ಆಸ್ಪತ್ರೆ ಸ್ಥಾಪನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಎಸ್ಸೆಸ್ ಆಸ್ಪತ್ರೆ ಜತೆ ವಿಲೀನಗೊಂಡ ಬೆಂಗಳೂರಿನ ಸ್ಪರ್ಶ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು ಸಂಭವಿಸುತ್ತವೆ. ಗಾಯಗೊಂಡ ವ್ಯಕ್ತಿಗೆ ಅಪಘಾತವಾದ ಒಂದು ಗಂಟೆ ಒಳಗೆ ಚಿಕಿತ್ಸೆ ನೀಡಿದರೆ ಬದುಕುಳಿಯಲು ಸಾಧ್ಯ. ಎಸ್ಸೆಸ್ ಆಸ್ಪತ್ರೆಯ ಪಕ್ಕ ರಾಷ್ಟ್ರೀಯ  ಹೆದ್ದಾರಿ ಹಾದು ಹೋಗಿರುವುದರಿಂದ ಇಲ್ಲಿ ಗಂಭೀರ ಸ್ವರೂಪದ ಅಪಘಾತ ಚಿಕಿತ್ಸಾ ಕೇಂದ್ರದ ಅಗತ್ಯವಿತ್ತು.
 
ಶಾಮನೂರು ಶಿವಶಂಕರಪ್ಪ ಅವರ ಆಲೋಚನೆ ಉತ್ತಮವಾಗಿದೆ. ಬಡವರಿಗೂ ಇಲ್ಲಿ ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಎಸ್ಸೆಸ್ ಆಸ್ಪತ್ರೆಗೆ ಸ್ಪರ್ಶ ಆಸ್ಪತ್ರೆ ವಿಲೀನಗೊಂಡ ಪರಿಣಾಮ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬಡವರೂ ಈ ಸೇವೆಯ ಲಾಭ ಪಡೆಯಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಎಸ್ಸೆಸ್ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ 5 ವರ್ಷವಾಗಿದೆ. ಈಚೆಗೆ ಮೊದಲ ಬ್ಯಾಚ್ ಹೊರಬಿದ್ದಿದೆ. ಕಾಲೇಜಿನಲ್ಲಿ ತುರ್ತು ಔಷಧೋಪಚಾರ (ಎಮರ್ಜೆನ್ಸಿ ಮೆಡಿಸಿನ್) ಎಂಬ ಹೊಸ ಕೋರ್ಸ್ ಆರಂಭಿಸಲಿದ್ದೇವೆ. ಸ್ಪರ್ಶ ಆಸ್ಪತ್ರೆಯೊಂದಿಗೆ ಸೇರಿ ಕೈಗೊಂಡಿರುವ ಈ ಯೋಜನೆಗಳು ಜನರಿಗೆ ತಲುಪುವಂತಾದರೆ ಶ್ರಮ ಸಾರ್ಥಕವಾಗುತ್ತದೆ ಎಂದರು.

ಬೆಂಗಳೂರಿನ ನಾರಾಯಣ ಹೃದ್ರೋಗ ಆಸ್ಪತ್ರೆ ಮತ್ತು ಕಿಮ್ಸ ಜತೆ ಸೇರಿ ನಗರದಲ್ಲಿ ಶೀಘ್ರ ಹೃದ್ರೋಗ ಚಿಕಿತ್ಸಾಲಯ ಘಟಕ ಪ್ರಾರಂಭಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಸ್ಪರ್ಶ ಆಸ್ಪತ್ರೆಯ ನಿರ್ದೇಶಕ ಡಾ.ಶರಣ್ ಪಾಟೀಲ್ ಮಾತನಾಡಿ, ಸುನಾಮಿಯಲ್ಲಿ ಸಾಯುವಷ್ಟು ಜನ ಇಂದು ಪ್ರತಿವರ್ಷ ರಸ್ತೆ ಅಪಘಾತದಿಂದ ಮೃತಪಡುತ್ತಾರೆ. ರಸ್ತೆ ಅಪಘಾತ ಮಾನವ ಮಾಡಿಕೊಂಡ ಸಮಸ್ಯೆ ಎಂದು ವಿಷಾದಿಸಿದರು.

ಶಾಸಕರಾದ ಎಚ್.ಎಸ್. ಮಹಾದೇವ ಪ್ರಸಾದ್, ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಕೊಂಡಯ್ಯ, ಮಾಜಿ ಶಾಸಕ ಎಚ್. ಆಂಜನೇಯ, ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ, ಪ್ರಾಂಶುಪಾಲ ಡಾ.ಪಿ. ನಾಗರಾಜ್, ಆಡಳಿತಾಧಿಕಾರಿ ಡಾ.ಸತ್ಯನಾರಾಯಣ ಉಪಸ್ಥಿತರಿದ್ದರು.

ಡಾ.ಅನಿಲ್ ನೆಲವಿಗಿ ಸ್ವಾಗತಿಸಿದರು. ಡಾ.ಸುಜನಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಡಾ.ಶರಣ್ ಪಾಟೀಲ್ ಆಸ್ಪತ್ರೆ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.