ADVERTISEMENT

ಬರಪೀಡಿತ ವಿಧಾನಸಭಾ ಕ್ಷೇತ್ರಕ್ಕೆ ರೂ 30 ಲಕ್ಷ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 4:45 IST
Last Updated 21 ಏಪ್ರಿಲ್ 2012, 4:45 IST

ದಾವಣಗೆರೆ: ಬರಪೀಡಿತ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ 30 ಲಕ್ಷ ಅನುದಾನ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಚಿವರ ತಂಡ ನಡೆಸಿದ ಬರಪೀಡಿತ ತಾಲ್ಲೂಕುಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

2009-10ನೇ ಸಾಲಿನ ಉದ್ಯೋಗ ಖಾತ್ರಿಯ ಬಾಕಿ ವೇತನ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ಚರ್ಚಿಸಲಾಗಿದೆ. ಇಡೀ ರಾಜ್ಯದಲ್ಲೇ ಆ ವರ್ಷ ಸಮಸ್ಯೆಯಾಗಿದೆ. ಹಿಂದಿನ ವರ್ಷದ ಬಾಕಿ ಹಣ ನೀಡಿದ ನಂತರ ಹೊಸ ಕಾಮಗಾರಿಗೆ ಹಣ ನೀಡುವಂತೆ ಜಿಲ್ಲಾ ಪಂಚಾಯ್ತಿ ಸಿಇಒಗೆ ಸೂಚಿಸಿದರು.

ಇದಕ್ಕೂ ಮೊದಲು ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್ ಮಾತನಾಡಿ, ಜಿಲ್ಲೆಗೆ ಹಿಂದಿನ ವರ್ಷ ರೂ 118 ಕೋಟಿ ಹಣ ದೊರೆತಿತ್ತು. ಆದರೆ, ್ಙ 183 ಕೋಟಿ ಕೆಲಸವಾಗಿದೆ. ಉಳಿದ ರೂ 66 ಕೋಟಿ ಹಣ ಬಾಕಿ ಇದೆ. 2012-13ಕ್ಕೆ ರೂ 76 ಕೋಟಿ ಬಿಡುಗಡೆಯಾಗಿದ್ದು, ಈ ವರ್ಷಕ್ಕೆ ಬಳಸಿಕೊಳ್ಳಲು ಸೂಚಿಸಲಾಗಿದೆ. ಅದರಲ್ಲಿ ಹಿಂದಿನ ವರ್ಷದ ಬಾಕಿ ಪಾವತಿಗೆ ಅನುಮತಿ ನೀಡುವಂತೆ ಸಚಿವರನ್ನು ಕೋರಿದರು.

ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಲ್ಲೆಲ್ಲ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದುವರೆಗೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಯಾವ ಗ್ರಾಮಗಳಿಂದಲೂ ಬೇಡಿಕೆ ಬಂದಿಲ್ಲ. ಮಳೆ-ಗಾಳಿಯಿಂದ ಮನೆ, ಜಾನುವಾರುಗಳಿಗೆ ಹಾನಿಯಾದರೆ ಕೂಡಲೇ ಪರಿಹಾರ ನೀಡಲು ಪ್ರತಿ ತಾಲ್ಲೂಕಿಗೆ ್ಙ 5 ಲಕ್ಷ ನೀಡಲಾಗಿದೆ ಎಂದು ಸಚಿವರ ತಂಡಕ್ಕೆ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಜಾನುವಾರುಗಳಿಗೆ ಅಗತ್ಯವಾದ ಮೇವು ಸಂಗ್ರಹಿಸಿ ಇಡಲಾಗಿದೆ. ಇನ್ನೂ ಐದು ವಾರಕ್ಕೆ ಮೇವು ಆಗಲಿದೆ. ಅಷ್ಟರಲ್ಲಿ ಬತ್ತದ ಹುಲ್ಲು ದೊರೆಯುತ್ತದೆ ಎಂದರು.

ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಅನಾವೃಷ್ಟಿಯಂತೆ ಈಚೆಗೆ ಸುರಿದ ಮಳೆಗೆ ಮನೆ-ಬೆಳೆ ಹಾನಿಗೂ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ 519 ಗ್ರಾಮಗಳಲ್ಲಿ ಸಮಸ್ಯೆ ಇದೆ. ಸಮಸ್ಯೆ ನಿವಾರಣೆಗೆ ರೂ16.75 ಕೋಟಿ ಅನುದಾನದ ಅಗತ್ಯವಿದೆ. ರೂ 1.62 ಕೋಟಿ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಲಾಗಿದೆ. ಸಿಆರ್‌ಎಫ್ ನಿಧಿ ಅಡಿ ರೂ 1.98 ಕೋಟಿ, ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ್ಙ 2.22 ಕೋಟಿ ವ್ಯಯಿಸಿ ಒಟ್ಟು 301 ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ 207 ಗ್ರಾಮಗಳಲ್ಲಿ ಸಮಸ್ಯೆ ಇದ್ದು, ್ಙ 9.14 ಕೋಟಿ ಅನುದಾನದ ಅಗತ್ಯವಿದೆ ಎಂದು ಸಚಿವರ ಗಮನ ಸಳೆದರು.

ತಂಡದ ಸದಸ್ಯರಾದ ಸಚಿವ ಗೋವಿಂದ ಕಾರಜೋಳ, ಸಿ.ಎಂ. ಉದಾಸಿ, ಶಾಸಕ ಎಸ್.ವಿ. ರಾಮಚಂದ್ರ, ಎಂ. ಬಸವರಾಜನಾಯ್ಕ, ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಜಯಲಕ್ಷ್ಮೀ ಮಹೇಶ್, ಹೆಚ್ಚುವರಿ ಡಿಸಿ ವಿಜಯಕುಮಾರ್, ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್, ಪಶು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಹೇಶ್‌ಗೌಡ, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಎ.ಎಂ. ಶೈಲಜಾ ಪ್ರಿಯದರ್ಶಿನಿ, ಜಿ. ನಜ್ಮಾ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.