ದಾವಣಗೆರೆ: ಪ್ರಸಕ್ತ ಸಾಲಿನಿಂದ ಬಿ.ಇಡಿ ಕೋರ್ಸ್‌ಗೆ ಸರ್ಕಾರ ಎರಡು ವರ್ಷ ಕಡ್ಡಾಯಗೊಳಿಸಿ, ಆದೇಶ ಹೊರಡಿಸಿದೆ. 2015ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿದು, 2016ರ ಬಿ.ಇಡಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ವರ್ಷ 9 ತಿಂಗಳ ಕಾಲ ಬಿ.ಇಡಿ ಕೋರ್ಸ್ ಮುಗಿಸಿದ ಪ್ರಶಿಕ್ಷಣಾರ್ಥಿಗಳು ಹರ್ಷದಲ್ಲಿದ್ದರೆ, ಮತ್ತೆ ಬಿ.ಇಡಿಗೆ ಪ್ರವೇಶ ಪಡೆಯುವವರು ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ 13 ಕಾಲೇಜು: ಜಿಲ್ಲೆಯ 13 ಬಿ.ಇಡಿ ಕಾಲೇಜುಗಳು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ದಾವಣಗೆರೆಯಲ್ಲಿ 8, ಹರಿಹರದಲ್ಲಿ 2, ಜಗಳೂರು, ಹರಪನಹಳ್ಳಿ, ಹೊನ್ನಾಳಿಯಲ್ಲಿ ಒಂದೊಂದು ಬಿ.ಇಡಿ ಕಾಲೇಜುಗಳಿವೆ. ಕಳೆದ ಬಾರಿ 688 ಪ್ರಶಿಕ್ಷಣಾರ್ಥಿಗಳು ಪ್ರವೇಶ ಪಡೆದಿದ್ದು, ಈ ಸಾಲಿನಲ್ಲಿ ಅದರ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಡಯಟ್ ಮಾಹಿತಿ ನೀಡಿದೆ.
ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತಿನ (ಎನ್‌ಸಿಟಿಇ)–2014ರ ನಿಯಮಾವಳಿ ಅನ್ವಯ ರಾಜ್ಯದ ಎಲ್ಲ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅರೆ ಸರ್ಕಾರಿ, ಅನುದಾನ, ಅನುದಾನರಹಿತ ಬಿ.ಇಡಿ ಕಾಲೇಜಿನಲ್ಲಿ 9 ತಿಂಗಳ ಬಿ.ಇಡಿ ಕೋರ್ಸ್‌ನ್ನು 2 ವರ್ಷದ ಅವಧಿಗೆ ವಿಸ್ತರಣೆಗೊಳಿಸಿ ಸರ್ಕಾರ ನ.20ರಂದು ಎಲ್ಲ ವಿ.ವಿಗಳಿಗೆ ಆದೇಶ ರವಾನಿಸಿದೆ.
ಉನ್ನತ ಶಿಕ್ಷಣದತ್ತ ಒಲವು: ಬಿ.ಇಡಿ ಕೋರ್ಸ್ ಅವಧಿ 2 ವರ್ಷಕ್ಕೆ ವಿಸ್ತರಿಸಲಾಗಿದ್ದು, ಇದಕ್ಕಿಂತ ಸ್ನಾತಕೋತ್ತರ ಶಿಕ್ಷಣದತ್ತ ವಿದ್ಯಾರ್ಥಿಗಳು ಒಲವು ತೋರಿಸುತ್ತಿದ್ದಾರೆ. ಇದರಿಂದ ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಪ್ರವೇಶಕ್ಕೆ ಹೆಚ್ಚು ಬೇಡಿಕೆ ಉಂಟಾಗಬಹುದು ಎಂದು ಡಯಟ್ ಪ್ರಾಂಶುಪಾಲ ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗುಣಮಟ್ಟದ ಕಲಿಕೆ: ಪ್ರಶಿಕ್ಷಣಾರ್ಥಿಗಳು 9 ತಿಂಗಳಲ್ಲಿ ಕೋರ್ಸ್ ಮುಗಿಸುತ್ತಾರೆ. ಹೊರತು ಗುಣಮಟ್ಟದ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಈ ಹಿಂದೆ ಶಿಕ್ಷಣ ಪಡೆದ ಪ್ರಶಿಕ್ಷಣಾರ್ಥಿಗಳಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಕೌಶಲ ಕಡಿಮೆ. ಆದ್ದರಿಂದ, ಸರ್ಕಾರ 2 ವರ್ಷ ಅವಧಿ ವಿಸ್ತರಣೆಗೊಳಿಸಿರುವುದರಿಂದ ಪ್ರಶಿಕ್ಷಣಾರ್ಥಿಗಳಿಗೆ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿದಂತಾಗಿದೆ ಎನ್ನುತ್ತಾರೆ ಅವರು.
ಬಿ.ಇಡಿ ಕಡ್ಡಾಯ: ಸ್ನಾತಕೋತ್ತರ ಪದವಿ ಪಡೆದು ಸರ್ಕಾರಿ ಹುದ್ದೆಯಲ್ಲಿರುವ ಪಿಯು ಉಪನ್ಯಾಸಕರಿಗೆ ಬಿ.ಇಡಿ ಕೋರ್ಸ್ ಕಡ್ಡಾಯವಾಗಿ ಮಾಡುವಂತೆ ಆದೇಶಿಸಿದೆ. ಇದರಿಂದ ಈಗಷ್ಟೇ ಸರ್ಕಾರಿ ಪಿಯು ಕಾಲೇಜುಗಳಲ್ಲಿ ನೇಮಕಾತಿ ಪಡೆದ ಉಪನ್ಯಾಸಕರಿಗೆ ತಲೆನೋವಾಗಿದೆ ಎಂದು ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.