ADVERTISEMENT

ಮಕ್ಕಳ ಪ್ರತಿಭೆ ಹೆಕ್ಕುವ ಜವಾಬ್ದಾರಿ ಶಿಕ್ಷಕರದ್ದು

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಮನೂರು ಶಿವಶಂಕರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:06 IST
Last Updated 17 ಡಿಸೆಂಬರ್ 2013, 8:06 IST

ದಾವಣಗೆರೆ: ‘ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಅಮೃತ ವಿದ್ಯಾಲಯದ ಆವರಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯ ಶಿಕ್ಷಕರದ್ದು. ವಿದ್ಯಾರ್ಥಿಗಳು ಸಹ ಆಸಕ್ತಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳ ಪಠ್ಯೇತರ ಚಟುವಟಿಕೆಗಳ ವಿಕಸನಕ್ಕೆ ಪೂರಕವಾಗಿದ್ದು, ಮನರಂಜನೆ ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕಾರಿ ಎಂದರು.

ಜಿಲ್ಲಾ ಪಂಚಾಯ್ತಿಯ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ನಾಗರಾಜ್‌ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಕೇವಲ ಶಿಕ್ಷಕರ ಕೆಲಸವಲ್ಲ, ಪೋಷಕರೂ ಸಹ ಮಕ್ಕಳ ಆಸಕ್ತಿ ಕ್ಷೇತ್ರ ಗುರುತಿಸಿ ಅದಕ್ಕೆ ನೀರೆರೆಯುವ ಕೆಲಸ ಮಾಡಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ.ಎಂ.ರುದ್ರೇಗೌಡ ಮಾತನಾಡಿ, ಮಕ್ಕಳು ದೈಹಿಕವಾಗಿ ಸಬಲರಾದಾಗ ಮಾತ್ರ ಶಿಕ್ಷಣದತ್ತ ಗಮನಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಸಹನಾ ರವಿ ಮಾತನಾಡಿದರು.

ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕಿನ ಹಲವು ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕುಕ್ಕುವಾಡ ಗ್ರಾಮದ ವಿದ್ಯಾಸಾಗರ ಶಾಲೆ ಮಕ್ಕಳ ವೀರಗಾಸೆ, ನಗರದ ಹೊಂಡ ಸರ್ಕಲ್‌ ಸರ್ಕಾರಿ ಶಾಲಾ ಮಕ್ಕಳ ಹಾಲಕ್ಕಿ ಕುಣಿತ ಗಮನ ಸೆಳೆಯಿತು. ಭರತನಾಟ್ಯ, ಭಾವಗೀತೆ, ಜನಪದ ನೃತ್ಯ, ಕೋಲಾಟ, ನಾಟಕ ಸೇರಿದಂತೆ 20ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಡಿಡಿಪಿಐ ಡಿ.ಕೆ.ಶಿವಕುಮಾರ್‌ ಪ್ರಾಸ್ತವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಸ್ವಾಗತಿಸಿದರು. ಡಯಟ್‌ ಉಪ ಪ್ರಾಂಶುಪಾಲೆ ಎಚ್‌.ಎಂ.ಪ್ರೇಮಾ, ಕ್ಷೇತ್ರ ಸಮನ್ವಯಾಧಿಕಾರಿ ಎಚ್‌.ಆರ್‌.ವಿಶಾಲಾಕ್ಷಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಾ ಅಜ್ಜಪ್ಪ, ಅಮೃತ ವಿದ್ಯಾಲಯದ ಪ್ರಾಂಶುಪಾಲೆ ಅಂಜಲಿ, ಜಸ್ಟೀಸ್‌ ಡಿಸೋಜ, ದುರುಗಪ್ಪ, ಎಚ್‌.ಚಂದ್ರಪ್ಪ, ಜಗದೀಶ್‌, ಯಾದವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.