ADVERTISEMENT

ಮನೆಗೊಂದು ಫಿಲ್ಟರ್ ಒದಗಿಸಿ: ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:05 IST
Last Updated 19 ಮಾರ್ಚ್ 2012, 6:05 IST

ದಾವಣಗೆರೆ: ಜಿಲ್ಲೆಯಲ್ಲಿ ಕೆರೆ, ನಾಲೆ, ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಆಗುವುದರಿಂದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಂಭವ ಇರುತ್ತದೆ. ಆದ್ದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗೂ ಫಿಲ್ಟರ್ ಒದಗಿಸಬೇಕು ಹಾಗೂ ಸ್ಥಳೀಯ ಸಂಸ್ಥೆಗಳ ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಕಾಯ್ದಿರಿಸಬೇಕು ಎಂಬ ಜೆಡಿಯು ಅಲ್ಪಸಂಖ್ಯಾತರ ವಿಭಾಗದ ಒತ್ತಾಯಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ.

ನಗರದ ಜೆಡಿಯು ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮುದ್ದಾಪುರ ರೆಹಮಾನ್ ತಿಳಿಸಿದರು.

ಪಕ್ಷದ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ, ಮನೆಗಳಿಗೆ ಫಿಲ್ಟರ್ ಒದಗಿಸಲು ಶೇ. 22.75, ಶೇ. 7.25 ಮತ್ತು ಶೇ. 3ರ ಅನುದಾನದಲ್ಲಿ ಈ ಕಾರ್ಯಕ್ರಮ ಅಳವಡಿಸಲು ಪರಿಶೀಲಿಸುವಂತೆ ತಿಳಿಸಿದ್ದಾರೆ. ಫಿಲ್ಟರ್ ಅಳವಡಿಕೆ ಕಾರ್ಯ ಅನುಷ್ಠಾನಕ್ಕೆ ಬಂದರೆ, ಜ್ವರ, ತಲೆನೋವು, ಸುಸ್ತು, ಕಾಮಾಲೆ ಮತ್ತಿತರ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.

ADVERTISEMENT

ನೀರು ಸರಬರಾಜು ಮಾಡುವ ಪೈಪ್‌ಗಳನ್ನು ಸ್ವಚ್ಛಗೊಳಿಸುವುದಿಲ್ಲ. ಹೀಗಾಗಿ, ವಿಷಪೂರಿತ ನೀರು ಸರಬರಾಜಾಗುತ್ತದೆ. ಇದನ್ನು ಅರಿಯದ ನಾಗರಿಕರು, ರೋಗಗಳಿಗೆ ತುತ್ತಾಗುತ್ತಿದ್ದು, ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ. ಹೀಗಾಗಿ, ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ರಾಜ್ಯದ  ಪ್ರತಿ ಮನೆಗೂ ಫಿಲ್ಟರ್‌ಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು. ಇದರಿಂದ ಆರೋಗ್ಯ ಕಾಪಾಡಿದಂತೆ ಆಗುತ್ತದೆ ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೃಷ್ಣೋಜಿರಾವ್, ಮಹಾಪ್ರಧಾನ ಕಾರ್ಯದರ್ಶಿ ಎಸ್.ಎ. ನಾಗರಾಜ್, ಸಂಘಟನಾ ಕಾರ್ಯದರ್ಶಿ ಎಚ್.ಜಿ. ಮಂಜುನಾಥ್, ಮಹಿಳಾ ವಿಭಾಗದ ಮಹಾಪ್ರಧಾನ ಕಾರ್ಯದರ್ಶಿ ಕುಸಮಾ ಘೋರ್ಪಡೆ ಮೈಲಾರಪ್ಪ, ಉಪಾಧ್ಯಕ್ಷೆ ರಜಿಯಾ ಬೇಗಂ, ದಾವಣಗೆರೆ ದಕ್ಷಿಣ ವಲಯ ಅಧ್ಯಕ್ಷ ಶಬ್ಬೀರ್, ಹರಿಹರ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ರಾಟೆಮನೆ ರಾಜಸಾಬ್, ಉಪಾಧ್ಯಕ್ಷ ಹನುಮಂತರಾವ್, ಮಹಾಪ್ರಧಾನ ಕಾರ್ಯದರ್ಶಿ ಖಾಸಿಂ ಸಾಬ್, ಸುಬಾನ್ ಸಾಬ್, ಜಗಳೂರು ತಾಲ್ಲೂಕು ಘಟಕದ ಅಧ್ಯಕ್ಷ ಉಡೇದಾರ್ ಟಿಪ್ಪುಸಾಬ್, ಉಪಾಧ್ಯಕ್ಷ ಫಕ್ಕೀರ್‌ಸಾಬ್, ಎಸಾನುಲ್ಲಾ ಪಟೇಲ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.