ADVERTISEMENT

ಮಹಿಳೆಯಿಂದ ಭ್ರಷ್ಟಾಚಾರ ನಿವಾರಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:30 IST
Last Updated 19 ಸೆಪ್ಟೆಂಬರ್ 2011, 8:30 IST

ದಾವಣಗೆರೆ: `ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪ್ರವೇಶಿಸಿದಲ್ಲಿ, ಭ್ರಷ್ಟಾಚಾರ ನಿವಾರಿಸಬಹುದು~ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಭಿಪ್ರಾಯಪಟ್ಟರು. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಿಳೆಯರು ರಾಜಕೀಯ ಕ್ಷೇತ್ರ ಪ್ರವೇಶಿಸಬೇಕು. ಇಂದಿನ ದಿನಗಳಲ್ಲಿ ಪುರುಷರು ಮತ ಕೇಳಲು ಹೋದರೆ, ಮತದಾರರು ಅವರನ್ನು ಕೀಳಾಗಿ, ಅನುಮಾನದಿಂದ ಕಾಣುತ್ತಾರೆ. ಅದಕ್ಕೆ ಭ್ರಷ್ಟಾಚಾರವೇ ಕಾರಣ. ಹಾಗಾಗಿ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಬಂದಲ್ಲಿ ಭ್ರಷ್ಟಾಚಾರ ನಿವಾರಣೆ ಸಾಧ್ಯವಾಗುತ್ತದೆ ಎಂದು ನುಡಿದರು.

ದೇಶದಲ್ಲಿ ರಾಷ್ಟ್ರಪತಿ, ಲೋಕಸಭಾ ಸ್ಪೀಕರ್, ಯುಪಿಎ ಅಧ್ಯಕ್ಷೆ, ವಿರೋಧಪಕ್ಷದ ನಾಯಕತ್ವ ಸ್ಥಾನದಲ್ಲಿ ಮಹಿಳೆಯರೇ ಇದ್ದಾರೆ. ಆದರೆ, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಾತ್ರ ಮಹಿಳಾ ಪ್ರಾತಿನಿಧ್ಯ ಕಡಿಮೆ ಇದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಶೇ. 33ರ ಮಹಿಳಾ ಮಸೂದೆ ರೂಪಿಸಲಾಗಿತ್ತು. ಆದರೆ, ಅಂದು ವಿರೋಧ ಪಕ್ಷ ಮಸೂದೆಗೆ ವಿರೋಧಿಸಿತ್ತು. ಲೋಕಸಭೆಯಲ್ಲಿ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರ ಒತ್ತಡದಿಂದ ಕೇಂದ್ರದ ಯುಪಿಎ ಸರ್ಕಾರ ರಾಜ್ಯಸಭೆಯಲ್ಲಿ ಮಾತ್ರ ಮಸೂದೆ ಅಂಗೀಕರಿಸಿದೆ ಎಂದರು.

ಸಭೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಹಿಂದೆ ಬಿಜೆಪಿ ಬುದ್ಧಿವಂತರ ಪಕ್ಷ ಎಂದು ಹೆಸರು ಗಳಿಸಿತ್ತು. ಆದರೆ, ಈಗ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ ಜನಸಾಮಾನ್ಯರ ಪಕ್ಷವಾಗಿ ರೂಪುಗೊಂಡಿದೆ. 1951ರಿಂದಲೂ `ಜನಸಂಘ~ ಸಕ್ರಿಯವಾಗಿದೆ.  ಸಂಘ ಪರಿವಾರದ ಸಲಹೆ, ಮಾರ್ಗದರ್ಶನದ ಮೂಲಕ ಬಿಜೆಪಿ ಜನಸಾಮಾನ್ಯರಿಗೆ ಹತ್ತಿರವಾಗಲು ಯತ್ನಿಸುತ್ತಿದೆ ಎಂದು ನುಡಿದರು.

 ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆ ರೀನಾ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು.
ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನಾ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಗೀತಾ ವಿವೇಕಾನಂದ್, ಭಾರತಿ ಮುಗ್ಧಂ, ವಿನೋದಾ ನಟರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷೆ ಸುಧಾ ಜಯರುದ್ರೇಶ್, ಪಾಲಿಕೆ ಮಾಜಿ ಮೇಯರ್ ಉಮಾ ಪ್ರಕಾಶ್,

ಮೇಯರ್ ಎಂ.ಎಸ್. ವಿಠ್ಠಲ್, ಉಪ ಮೇಯರ್ ಜ್ಯೋತಿ ಪಾಟೀಲ್, ಸದಸ್ಯೆ ಜ್ಯೋತಿ ಸಿದ್ದೇಶ್, ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಸಕರಾದ ಎಂ. ಬಸವರಾಜ ನಾಯ್ಕ, ಬಿ.ಪಿ. ಹರೀಶ್, ಎಸ್.ವಿ. ರಾಮಚಂದ್ರ, ಮೈಸೂರು ಎಲೆಕ್ಟ್ರಿಕಲ್ಸ್ ಅಧ್ಯಕ್ಷ ಟಿ. ಗುರುಸಿದ್ದನಗೌಡ, ದಾವಣಗೆರೆ -ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಅಧ್ಯಕ್ಷ ಯಶವಂತರಾವ್ ಜಾಧವ್ ಹಾಜರಿದ್ದರು.                                    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.