ADVERTISEMENT

ಮಿನಿ ವಿಧಾನಸೌಧ ಸಮಸ್ಯೆಗಳ ಆಗರ

ಜಗಳೂರು: ಶೌಚಾಲಯ ಇಲ್ಲದೇ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರ ಪರದಾಟ

ಡಿ.ಶ್ರೀನಿವಾಸ
Published 24 ಮಾರ್ಚ್ 2018, 10:29 IST
Last Updated 24 ಮಾರ್ಚ್ 2018, 10:29 IST
ಜಗಳೂರಿನ ಮಿನಿ ವಿಧಾನಸೌಧ ಕಟ್ಟಡ
ಜಗಳೂರಿನ ಮಿನಿ ವಿಧಾನಸೌಧ ಕಟ್ಟಡ   

ಜಗಳೂರು: ಜನತೆಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ತಾಲ್ಲೂಕು ಆಡಳಿತದ ಕೇಂದ್ರವಾಗಿರುವ ಇಲ್ಲಿನ ಮಿನಿ ವಿಧಾನಸೌಧದ ಕಚೇರಿಯಲ್ಲೇ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಿಶಾಲ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಭವ್ಯವಾದ ಆಡಳಿತ ಸೌಧವನ್ನು ನಿರ್ಮಿಸಲಾಗಿದೆ. ಕಂದಾಯ ಇಲಾಖೆ, ಖಜಾನೆ, ಆಹಾರ ಮತ್ತು ನಾಗರಿಕ ಪೂರೈಕೆ, ಭೂ ಮಾಪನಾ ಇಲಾಖೆ, ನೋಂದಣಿ ಇಲಾಖೆ ಹಾಗೂ ಚುನಾವಣಾ ಶಾಖೆ ಸೇರಿದಂತೆ ಹಲವು ಇಲಾಖೆಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 70ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ತಮ್ಮ ಕೆಲಸ ಕಾರ್ಯಗಳಿಗೆ ವಿವಿಧ ಹಳ್ಳಿಗಳಿಂದ ಸಾವಿರಕ್ಕೂ ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ.

ಸದಾ ಜನದಟ್ಟಣೆಯಿಂದ ಕೂಡಿದ ಮಿನಿ ವಿಧಾನಸೌಧದ ಒಳಗೆ ಮತ್ತು ಹೊರಗೆ ಒಂದೂ ಶೌಚಾಲಯ ಸೌಲಭ್ಯವಿಲ್ಲ. ತಹಶೀಲ್ದಾರ್‌ ಹಾಗೂ ಗ್ರೇಡ್‌–2 ತಹಶೀಲ್ದಾರ್‌ ಸೇರಿದಂತೆ ಎಲ್ಲಾ ಅಧಿಕಾರಿಗಳ ಕಚೇರಿಯಲ್ಲೂ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯ ಇಲ್ಲ. 25ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಇಲ್ಲದೇ ಆರೋಗ್ಯ ಹದಗೆಡುವಂತಾಗಿದೆ.

ADVERTISEMENT

‘ದಿನವಿಡೀ ನಾವು ಒತ್ತಡದಲ್ಲೇ ಕೆಲಸ ಮಾಡಬೇಕು. ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಬಂದರೆ ಸಂಜೆ 6 ಗಂಟೆಯವರೆಗೂ ಕೆಲಸ ಇರುತ್ತೆ. ಕಚೇರಿಯಲ್ಲಿ ಶೌಚಾಲಯ ಇಲ್ಲ. ಮೂರು ವರ್ಷಗಳಿಂದ ಈ ಸಮಸ್ಯೆ ಇದ್ದು, ತೀವ್ರ ಮುಜುಗರದ ಸಂಗತಿಯಾಗಿದೆ. ಸಾರ್ವಜನಿಕರು ಮತ್ತು ಪುರುಷ ಸಿಬ್ಬಂದಿ ಕಚೇರಿ ಹಿಂಭಾಗದಲ್ಲಿ ಬೇಕಾಬಿಟ್ಟಿ ಮೂತ್ರ ಮಾಡುತ್ತಿದ್ದು, ದುರ್ನಾತ ಬೀರುತ್ತಿದೆ. ಸೊಳ್ಳೆಗಳು ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಇಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡರು.

‘ಪಹಣಿ ಮುಂತಾದ ಭೂ ದಾಖಲೆಗಳು, ಜಾತಿ, ಆದಾಯ ಪತ್ರ, ಪಡಿತರ ಚೀಟಿ, ನೋಂದಣಿ ಕಾರ್ಯ ಒಳಗೊಂಡಂತೆ ಹಲವು ಕೆಲಸಗಳಿಗಾಗಿ ತಾಲ್ಲೂಕಿನ ಹಳ್ಳಿಗಳಿಂದ ಹಿರಿಯರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಇಲ್ಲಿಗೆ ದೌಡಾಯಿಸುತ್ತಾರೆ. ಮಿನಿ ವಿಧಾನಸೌಧದ ಆವರಣದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಇಲ್ಲ. ತಾಲ್ಲೂಕಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದ ಮುಖ್ಯ ಆಡಳಿತ ಕಚೇರಿಯೇ ಸಮಸ್ಯೆಗಳ ಆಗರವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಸೌಧ ಸಮಸ್ಯೆಗಳ ಗೂಡಾಗಿದೆ’ ಎಂದು ಎಸ್‌ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಆರೋಪಿಸುತ್ತಾರೆ.

‘ಕಚೇರಿಯಲ್ಲಿ ನೀರಿನ ಸಮಸ್ಯೆಯಿಂದಾಗಿ ಶೌಚಾಲಯ ಬಳಕೆಯಾಗುತ್ತಿಲ್ಲ. ಎರಡು ವರ್ಷಗಳಿಂದ ಈ ಸಮಸ್ಯೆ ಇದೆ. ಕೊಳವೆಬಾವಿ ಕೊರೆಯಲು ಸೂಚಿಸಲಾಗಿದೆ. ₹ 2 ಲಕ್ಷ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ತಹಶೀಲ್ದಾರ್‌ ಶ್ರೀಧರಮೂರ್ತಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.