ADVERTISEMENT

ಲೋಕಸಭೆ: ಸಿಪಿಐನಿಂದ ಎಚ್‌ಕೆಆರ್‌ ಸ್ಪರ್ಧೆ

ಮುಖಂಡ ಸಿದ್ದನಗೌಡ ಪಾಟೀಲ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 5:44 IST
Last Updated 21 ಮಾರ್ಚ್ 2014, 5:44 IST

ದಾವಣಗೆರೆ: ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ.ರಾಮಚಂದ್ರಪ್ಪ ಅವರನ್ನು ಸಿಪಿಐ ಅಭ್ಯರ್ಥಿಯನ್ನಾಗಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು ಎಂದು ಸಿಪಿಐನ ರಾಷ್ಟ್ರೀಯ ಮಂಡಳಿಯ ಸದಸ್ಯ ಡಾ.ಸಿದ್ದನಗೌಡ ಪಾಟೀಲ್‌ ತಿಳಿಸಿದರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷದಿಂದ ದೇಶದಾದ್ಯಂತ 70 ಅಭ್ಯರ್ಥಿಗಳನ್ನು ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು. ರಾಜ್ಯದಲ್ಲಿ ಉಡುಪಿ–ಚಿಕ್ಕಮಗಳೂರಿನಿಂದ ವಿಜಯಕುಮಾರ್‌, ತುಮಕೂರಿನಿಂದ ಚಿನ್ನಪ್ಪ, ಮಂಗಳೂರಿನಿಂದ ಸಿಪಿಐ (ಎಂ)ನ ಯಾದವ ಶೆಟ್ಟಿ, ಚಿಕ್ಕಬಳ್ಳಾಪುರದಿಂದ ಸಿಪಿಐ(ಎಂ)ನಿಂದ ಜಿ.ವಿ.ಶ್ರೀರಾಮರೆಡ್ಡಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜಿ.ಆರ್‌.ಶಿವಶಂಕರ್‌ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

ದೇಶದ ಕಾರ್ಪೋರೇಟ್‌ ಕಂಪೆನಿಗಳು ರಾಷ್ಟ್ರೀಯ ಪಕ್ಷಗಳಿಗೆ ಚುನಾವಣೆ ಖರ್ಚಿಗಾಗಿ ಹಣವನ್ನು ದೇಣಿಗೆಯಾಗಿ ನೀಡುತ್ತಿವೆ. ಇಂತಹ ಕಂಪೆನಿಗಳಿಂದ ಈ ಹಿಂದೆ ಉಂಟಾದ ಹಗರಣಗಳು ಬಗ್ಗೆ ಸಂಸತ್ತಿನಲ್ಲಿ ಬಲವಾಗಿ ಪ್ರಶ್ನಿಸುವ ಗೋಜಿಗೆ ಬಿಜೆಪಿ ಸೇರಿದಂತೆ ಯಾವ ರಾಷ್ಟ್ರೀಯ ಪಕ್ಷಗಳು ಮುಂದಾಗಲಿಲ್ಲ. ಆದರೆ, ಸಿಪಿಐ ಪಕ್ಷದ ಮುಖಂಡರು ಪ್ರಶ್ನಿಸಿ, ಆ ಹಗರಣಗಳನ್ನು ಬಯಲಿಗೆ ತರುವಲ್ಲಿ ಶ್ರಮಿಸಿದರು ಎಂದರು.

ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡುಮೇಲು ಮಾಡುವಂತೆ ಕಾರ್ಪೋರೇಟ್‌ ಕಂಪೆನಿಗಳು ತಮ್ಮ ಬೇರುಗಳನ್ನು ವಿಸ್ತರಿಸಿಕೊಳ್ಳಲಿವೆ ಎಂದು ದೂರಿದ ಅವರು, ಜಾತಿ ಮತ್ತು ಹಣ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಭವಿಷ್ಯ ನುಡಿದರು.

ಯಾವ ರಾಷ್ಟ್ರೀಯ ಪಕ್ಷಕ್ಕೂ ಬಹುಮತ ದೊರೆಯುವುದಿಲ್ಲ. ಮುಂದಿನ ಸರ್ಕಾರ ರಚನೆ ಮಾಡುವಲ್ಲಿ ತೃತೀಯ ರಂಗ ಪ್ರಮುಖ ಪಾತ್ರ ವಹಿಸಲಿದೆ ಎಂದರು.

‘ನಮ್ಮಲ್ಲಿ ಹಣವಿಲ್ಲ. ‘ಓಟು ಕೊಡಿ, ನೋಟು ಕೊಡಿ’ ಎಂಬ ತತ್ವದ ಅಡಿಯಲ್ಲಿ ಜನರಲ್ಲಿ ಮತ ಕೇಳುತ್ತೇವೆ. ಕಾರ್ಮಿಕರ ಬೆಂಬಲವಿದೆ. ಮಾರ್ಚ್‌ 25ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ಜಯಗಳಿಸುವ ವಿಶ್ವಾಸವಿದೆ’ ಎಂದರು ಸಿಪಿಐ ಮುಖಂಡ ಎಚ್‌.ಕೆ.ರಾಮಚಂದ್ರಪ್ಪ.

ಆವರಗೆರೆ ಚಂದ್ರು, ಉಮೇಶ್‌, ಆನಂದರಾಜ್‌, ಆವರಗೆರೆ ವಾಸು, ರಾಮಪ್ಪ, ಚಂದ್ರಪ್ಪ ಕುಂದುವಾಡ, ಎಸ್‌.ಎ.ಚಂದ್ರಪ್ಪ, ತಿಪ್ಪೇಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.