ADVERTISEMENT

ವರ್ಷದೊಳಗೆ ಹಾಸ್ಟೆಲ್: ಸ್ವಾಮೀಜಿ ಆಶಯ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:15 IST
Last Updated 17 ಜೂನ್ 2011, 10:15 IST

ದಾವಣಗೆರೆ: ತರಳಬಾಳು ಹುಣ್ಣಿಮೆ ಸ್ಮರಣಾರ್ಥ ನಗರದಲ್ಲಿ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯ ನಿರ್ಮಿಸುವ ಯೋಜನೆಯಿದ್ದು, ಕಟ್ಟಡ ಸಮಿತಿಯವರು ಒಂದು ವರ್ಷದೊಳಗೆ ಅದನ್ನು ನಿರ್ಮಿಸಬೇಕು ಎಂದು ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು.

ಬಾಪೂಜಿ ಎಂಜಿನಿಯರಿಂಗ್‌ಮತ್ತು ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬಾಪೂಜಿ ಪಾಲಿಟೆಕ್ನಿಕ್ ವತಿಯಿಂದ, ಬಾಪೂಜಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸ್ಮರಣಾರ್ಥ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುವರ್ಣ ಭವನ ಕಟ್ಟಡ, ಆರೋಗ್ಯ ಕೇಂದ್ರ ಹಾಗೂ ಪ್ರಯೋಗಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ರಚಿಸಿರುವ ಕಟ್ಟಡ ಸಮಿತಿಯಲ್ಲಿ ಸಚಿವ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ, ಎ.ಸಿ. ಜಯಣ್ಣ ಅವರಿದ್ದಾರೆ. ಈಗಾಗಲೇ ಕಟ್ಟಡದ ನೀಲನಕ್ಷೆ ಸಿದ್ಧವಾಗಿದೆ. ಕಟ್ಟಡ ಒಂದು ವರ್ಷದೊಳಗೆ ಪೂರ್ಣಗೊಂಡು ಉದ್ಘಾಟನೆ ಆಗುವಂತೆ ಸಮಿತಿಯವರು ಪ್ರಯತ್ನಿಸಬೇಕು ಎಂದು ಸೂಚಿಸಿದರು.

`ಕರ್ನಾಟಕದ ಮ್ಯಾಂಚೆಸ್ಟರ್~ ಆಗಿದ್ದ ದಾವಣಗೆರೆ `ಕರ್ನಾಟಕದ ಆಕ್ಸ್‌ಫರ್ಡ್~ ಎನಿಸಿಕೊಳ್ಳಲು ಬಾಪೂಜಿ ವಿದ್ಯಾಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಅದರಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಇತರ ಪದಾಧಿಕಾರಿಗಳ ಶ್ರಮವಿದೆ ಎಂದು ಶ್ಲಾಘಿಸಿದರು.

ತಾಂತ್ರಿಕತೆ ಆಧುನಿಕ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅದು ಒಂದು ಮಿತಿಯಲ್ಲಿದ್ದರೆ ಒಳ್ಳೆಯದು. ಹದ್ದು ಮೀರಿದರೆ ಬದುಕಿನಲ್ಲಿ ಶುಷ್ಕತೆ ಆವರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಕಳೆದುಕೊಂಡಿದ್ದನ್ನು ಮತ್ತೆ ತಂದುಕೊಟ್ಟ ಕರ್ಮಯೋಗಿ ಎಂದು ಬಣ್ಣಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಸಂಸ್ಥೆಗೆ 5 ದಶಕಗಳ ಇತಿಹಾಸವಿದ್ದು ಮಧ್ಯ ಕರ್ನಾಟಕದಲ್ಲಿ ಶಿಕ್ಷಣದ ಪ್ರಸಾರ ಕಾರ್ಯದಲ್ಲಿ ತೊಡಗಿದೆ. 50ಕ್ಕೂ ಹೆಚ್ಚು ಅಂಗಸಂಸ್ಥೆ ಹೊಂದಿದ್ದು 18 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಐಇಟಿ ಅಧ್ಯಕ್ಷ ಎ.ಸಿ. ಜಯಣ್ಣ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಉಪಾಧ್ಯಕ್ಷರಾದ ಎ.ಎಸ್. ವೀರಣ್ಣ, ರಾಜನಹಳ್ಳಿ ರಮಾನಂದ್, ಕಿರುವಾಡಿ ಗಿರಿಜಮ್ಮ, ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ.ಬಿ.ಟಿ. ಅಚ್ಯುತ್ ಹಾಜರಿದ್ದರು.
ಡಾ.ಜಿ.ಪಿ. ದೇಸಾಯಿ ಪ್ರಾರ್ಥಿಸಿದರು. ಬಾಪೂಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಸ್. ವೀರೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.