ADVERTISEMENT

ವಿದ್ಯೆಯಿಂದ ಉತ್ತಮ ಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 7:05 IST
Last Updated 16 ಫೆಬ್ರುವರಿ 2011, 7:05 IST

ಚನ್ನಗಿರಿ: ಇಂದು ಆಧುನಿಕತೆಯ ಪ್ರಭಾವದಿಂದ ಸೇವೆಯ ಬದಲು ಸೇವನೆ ಕಾರ್ಯ ಹೆಚ್ಚಾಗಿದೆ. ಆದ್ದರಿಂದ ಮನುಷ್ಯ ಸತ್ಯ, ಶುದ್ಧ ಕಾಯಕದಿಂದ ದೇಹವನ್ನು ದಂಡಿಸಿ, ಮನಸ್ಸಿನ ಆಶಾಂತಿಯನ್ನು ತೊಲಗಿಸಿ, ಅನುಭವ ಕೂಟದಲ್ಲಿ ಸೇರಿ ಪ್ರಪುಲ್ಲಗೊಳಿಸಿಕೊಂಡಾಗ ಕಾಯಕವೇ ಕೈಲಾಸ ಎಂದು ಸಮಾಜದಲ್ಲಿ ಕಿಂಕರನಾದರೆ ಶಂಕರನಾಗಬಹುದು ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಸೋಮವಾರ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ನಡೆದ ಸಂತೇಬೆನ್ನೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣದಿಂದ ಮಾತ್ರ ಪರಸ್ಪರ ಸಹಕಾರ ಹಾಗೂ ಮನೋವೈಶಾಲ್ಯತೆಯನ್ನು ಬೆಳೆಸಿ ಕೊಳ್ಳಬಹುದು. ವಿದ್ಯೆಯಿಂದ ಮಾತ್ರ ಮನುಷ್ಯ ಸಂಸ್ಕಾರವಂತನಾಗಲು ಸಾಧ್ಯ. ಆ ನಿಟ್ಟಿನಲ್ಲಿ ಸೇವಾ ಮನೋಭಾವನೆ, ಪರಸ್ಪರ ಕಷ್ಟಗಳಿಗೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಂಡಾಗ ಮನದಲ್ಲಿ ಮಾಲಿನ್ಯ ತೊಲಗಿ ಮನುಷ್ಯ ಸುಖಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಪಿ. ವಾಗೀಶ್, ಜಿಲ್ಲಾ ಬಿಜೆಪಿ ಉಪಧ್ಯಕ್ಷ ಎಲ್.ಪಿ. ಚಿದಾನಂದಮೂರ್ತಿ, ನಿವೃತ್ತ ಪ್ರಾಂಶುಪಾಲ ಡಿ.ಕೆ. ಬಸಪ್ಪ, ಗ್ರಾ.ಪಂ. ಅಧ್ಯಕ್ಷ ಎಚ್. ದುರುಗೇಶ್, ಎಂ.ಬಿ. ನಾಗರಾಜ್ ಕಾಕನೂರು ಮುಂತಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ. ಈ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.ಎಚ್.ಟಿ. ಮಾರುತಿ ಪ್ರಾರ್ಥಿಸಿದರು. ಅಣ್ಣಪ್ಪ ಸ್ವಾಮಿ ಸ್ವಾಗತಿಸಿದರು. ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕರಿಬಸಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.