ADVERTISEMENT

ವಿಪತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ಅಗತ್ಯ

‘ಪ್ರಕೃತಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ’ದಲ್ಲಿ ಎಸ್ಪಿ ಬೋರಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2015, 6:38 IST
Last Updated 26 ಫೆಬ್ರುವರಿ 2015, 6:38 IST
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಕೃತಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ’ ಹಾಗೂ ಫಿಲ್ಡ್‌ ಮಾರ್ಷಲ್‌ ಕಾರ್ಯಪ್ಪ ನೇಚರ್‌ ಅವೇರನೆಸ್‌ ಅಂಡ್‌ ಅಡ್ವೆಂಚರ್‌ ಕ್ಲಬ್‌ನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಬಿ.ಬೋರಲಿಂಗಯ್ಯ ಉದ್ಘಾಟಿಸಿ, ಮಾತನಾಡಿದರು.
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಕೃತಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ’ ಹಾಗೂ ಫಿಲ್ಡ್‌ ಮಾರ್ಷಲ್‌ ಕಾರ್ಯಪ್ಪ ನೇಚರ್‌ ಅವೇರನೆಸ್‌ ಅಂಡ್‌ ಅಡ್ವೆಂಚರ್‌ ಕ್ಲಬ್‌ನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಬಿ.ಬೋರಲಿಂಗಯ್ಯ ಉದ್ಘಾಟಿಸಿ, ಮಾತನಾಡಿದರು.   

ದಾವಣಗೆರೆ: ‘ತಂತ್ರಜ್ಞಾನದ ಅರಿವು, ಸಾಮಾನ್ಯ ತಿಳಿವಳಿಕೆ ಹಾಗೂ ಸೂಕ್ತ ಮಾರ್ಗದರ್ಶನ ಇದ್ದಲ್ಲಿ ರಾಷ್ಟ್ರೀಯ ವಿಪತ್ತು ಸೇರಿದಂತೆ ಮಾನವ ನಿರ್ಮಿತ ವಿಪತ್ತುಗಳನ್ನು ಅಲ್ಪಮಟ್ಟಿಗೆ ತಡೆಗಟ್ಟಬಹುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ .ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ ಹಾಗೂ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ಟೀಮ್‌ ಮತ್ತು ಯುವ ರೆಡ್‌ಕ್ರಾಸ್‌, ಕಮ್ಯುನಿಟಿ ಮೆಡಿಸಿನ್‌ ಎಸ್‌.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಇವುಗಳ ಸಹಯೋಗದಲ್ಲಿ ಬುಧವಾರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಪ್ರಕೃತಿ ವಿಪತ್ತು ನಿರ್ವಾಹಣಾ ತರಬೇತಿ’ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಜಲಪ್ರಳಯ, ಸುನಾಮಿ, ಭೂಕಂಪ ಸೇರಿದಂತೆ ಪ್ರಕೃತಿ ವಿಪತ್ತುಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಅವುಗಳಿಂದ ಸಾಕಷ್ಟು ಆಸ್ತಿ–ಪಾಸ್ತಿ ಹಾಗೂ ಜೀವಹಾನಿ ಆಗುವ ಸಂಭವ ಹೆಚ್ಚು. ನಂತರದ ದಿನಗಳಲ್ಲಿ ವ್ಯವಸ್ಥೆಯ ಪುನರ್‌ ನಿರ್ಮಾಣ ಮಾಡುವಲ್ಲಿ ತಂತ್ರಜ್ಞಾನದ ನೆರವು ತುಂಬಾ ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

‘ಜಪಾನ್‌ನಲ್ಲಿ ಭೂಕಂಪ ಹಾಗೂ ಅಣುಸ್ಥಾವರ ದುರಂತಗಳು ಸಂಭವಿಸಿದಾಗ, ಅಲ್ಲಿನ ಜನರು ಎದೆಗುಂದದೇ ತಂತ್ರಜ್ಞಾನವನ್ನು ಸದುಪಯೋಗ ಪಡೆದುಕೊಂಡು ಬಹು ಬೇಗನೆ ಪುನರ್‌ ನಿರ್ಮಾಣ ಮಾಡಿದರು’ ಎಂದು ಅವರು ಸ್ಪಷ್ಟಪಡಿಸಿದರು.

‘ಬೆಂಕಿ ಆಕಸ್ಮಿಕ, ರಸ್ತೆ ಅಪಘಾತ, ಮಳೆ ದುರಂತ ಇಂತಹ ಅವಘಡಗಳು ಸಂಭವಿಸಿದಾಗ ಸ್ಥಳೀಯರ ಸಹಕಾರ ಹಾಗೂ ಸಂಘ ಸಂಸ್ಥೆಗಳ ನೆರವು ತುಂಬಾ ಅವಶ್ಯ. ಆದರೆ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಲ್ಲಿ ಸೂಕ್ತ ತರಬೇತಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ –ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಶಿಬಿರ ಆಯೋಜಿಸುವುದು ಶ್ಲಾಘನೀಯ ಕೆಲಸ’ ಎಂದರು.

ಎಸ್.ಎಸ್‌.ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ ಪಿ.ಕೃಷ್ಣಮೂರ್ತಿ ಅವರು ಮಾತನಾಡಿ, ‘ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಪ್ರತಿಯೊಬ್ಬರು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿಯಬೇಕು’ ಎಂದು ಹೇಳಿದರು.

ಇದೇ ಸಮಯದಲ್ಲಿ ಫಿಲ್ಡ್‌ ಮಾರ್ಷಲ್‌ ಕಾರ್ಯಪ್ಪ ನೇಚರ್‌ ಅವೇರ್‌ನೆಸ್‌ ಅಂಡ್‌ ಅಡ್ವೆಂಚರ್‌ ಕ್ಲಬ್‌ ಉದ್ಘಾಟನೆ ನಡೆಯಿತು. ನಂತರ ವಿವೇಕಾನಂದ ರೋವರ್ಸ್‌ ಕ್ರ್ಯೂ, ಕಲ್ಪನಾ ಚಾವ್ಲಾ ರೇಂಜರ್ಸ್‌ ತಂಡದ ವಿದ್ಯಾರ್ಥಿಗಳಿಗೆ ಸೇರಿದಂತೆ ಇತರೆ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಗ್ನಿಶಾಮಕದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ  ರಾಷ್ಟ್ರೀಯ ವಿಪತ್ತು  ನಿರ್ವಹಣಾ ತರಬೇತಿ ನೀಡಿದರು.

ಜಿಲ್ಲಾ ಸ್ಕೌಟ್‌ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ, ಡಾ.ಎ.ಮಂಜಣ್ಣ, ಡಾ.ಕೆ.ನಾರಾಯಣ ಸ್ವಾಮಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.