ADVERTISEMENT

ಶರಣಬಸವೇಶ್ವರ ಅದ್ದೂರಿ ರಥೋತ್ಸವ

ಜಿಲ್ಲೆಯ ಗಡಿಭಾಗದ ಕಾನಾಮಡಗು ಗ್ರಾಮದಲ್ಲಿ ಭಕ್ತರ ಸಂಭ್ರಮ, ಸಡಗರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 9:03 IST
Last Updated 12 ಡಿಸೆಂಬರ್ 2013, 9:03 IST

ಜಗಳೂರು: ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ  ಕಾನಾಮಡಗು ಗ್ರಾಮದ  ಶರಣ ಬಸವೇಶ್ವರಸ್ವಾಮಿ ರಥೋತ್ಸವ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ  ವಿಜೃಂಭಣೆಯಿಂದ ನೆರವೇರಿತು. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುನೀತ ಭಾವ ತಳೆದರು. ದಾಸೋಹ ಪರಂಪರೆಯ, ಐತಿಹಾಸಿಕ ಶರಣಾರ್ಯ ಮಠ ನಾಡಿನಾದ್ಯಂತ ಭಕ್ತರನ್ನು ಒಳಗೊಂಡಿದ್ದು, ಮೂರು ದಿನಗಳ ಕಾಲ ಈ ಜಾತ್ರೋತ್ಸವ ನಡೆಯಲಿದೆ. 2ನೇ ದಿನವಾದ ಬುಧವಾರ ರಥೋತ್ಸವ ನೆರವೇರಿತು. ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಜಗಳೂರು ತಾಲ್ಲೂಕಿನ ಅಣಬೂರು, ಕಾನನಕಟ್ಟೆ, ಹುಚ್ಚವ್ವನಹಳ್ಳಿ, ಜ್ಯೋತಿಪುರ, ಕಸವನಹಳ್ಳಿ, ಹನುಮಂತಾಪುರ ಸೇರಿದಂತೆ ವಿವಿಧ ಹಳ್ಳಿಗಳ ಮಹಿಳೆಯರು ಮತ್ತು ಮಕ್ಕಳು ಎತ್ತಿನ ಗಾಡಿಗಳಲ್ಲಿ ಬಂದು, ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಹುತೇಕರು ಕುಟುಂಬ ಮಂದಿ ಸಮೇತ ಪಾಲ್ಗೊಂಡು, ದೇವರ ದರ್ಶನ ಪಡೆದು ರಥ ಎಳೆದರು.

ದಾಸೋಹ ಮಠದ ಐಮಡಿ ಶರಣಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಜಾತ್ರೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೆ ನಿತ್ಯ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆ ಹಾಗೂ ತಾಲ್ಲೂಕಿನ ರೈತರು ಜೋಳ, ಶೇಂಗಾ, ರಾಗಿ ಸೇರಿದಂತೆ ತಾವು ಬೆಳೆದ ಎಲ್ಲಾ ಬೆಳೆಗಳ ಪ್ರಥಮ ಕೊಯ್ಲಿನಲ್ಲಿ ಒಂದು ಭಾಗವನ್ನು ಶರಣಾರ್ಯ ಮಠಕ್ಕೆ ಭಕ್ತಿಪೂರ್ವಕವಾಗಿ ನೀಡುವ ಮೂಲಕ ಉತ್ತಮ ಮಳೆ, ಬೆಳೆಗಾಗಿ  ಹರಕೆ ತೀರಿಸುತ್ತಾ ಮಠದೊಂದಿಗೆ ರೈತರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಈ ಜಾತ್ರೆಯಲ್ಲಿಯೂ ರೈತರು ತಮ್ಮ ಹೊಲದಲ್ಲಿ ಬೆಳೆದ ದವಸ ಧಾನ್ಯವನ್ನು ಮಠಕ್ಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.