ADVERTISEMENT

ಶಾಶ್ವತ ಸಾಗುವಳಿ ಪತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:35 IST
Last Updated 21 ಜನವರಿ 2011, 8:35 IST

ಚನ್ನಗಿರಿ: ತಾಲ್ಲೂಕು ಬೆಳಲಗೆರೆ ಗ್ರಾಮದ ಸರ್ವೆ ನಂ. 21ರಲ್ಲಿ ಮಂಜೂರಾದ ಜಮೀನಿಗೆ ಕೃಷಿ ಅಕ್ರಮ ಪ್ರವೇಶ ಮಾಡಿರುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಶಾಶ್ವತ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಬೆಳಲಗೆರೆ ಗ್ರಾಮಸ್ಥರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಬಸವಾಪಟ್ಟಣ ಹೋಬಳಿ ಬೆಳಲಗೆರೆ ಗ್ರಾಮದ ಸರ್ಕಾರಿ ಗೋಮಾಳದ ಸರ್ವೆ ನಂ. 21ರಲ್ಲಿ 200 ಎಕರೆ ಖುಷ್ಕಿ ಜಮೀನಿನಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದ 95 ಜನರಿಗೆ 1963-64 ರಲ್ಲಿ ಸಾಗುವಳಿ ಮಾಡಿಕೊಳ್ಳಲು ಮಂಜೂರು ನೀಡಿದ್ದು, ಇನ್ನು ಉಳಿದ ಸಾಗುವಳಿದಾರರಿಗೆ ಮಂಜೂರಾತಿ ನೀಡಿಲ್ಲ. ಈ ಗೋಮಾಳದಲ್ಲಿ ಪರಿಶಿಷ್ಟ ಜಾತಿ, ವರ್ಗ ಹಾಗೂ ಅಲ್ಪಸಂಖ್ಯಾತರು ಕಡುಬಡವರಾಗಿದ್ದು, ಸಾಗುವಳಿ ಮಾಡಿಕೊಂಡು ಬಂದಿದ್ದೇವೆ.

ಆದರೆ, ಈಗ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದವರು ಜ. 12ರಂದು ಈ ಗೋಮಾಳ ಜಮೀನು ಇಲಾಖೆಗೆ ಸೇರಿದ್ದು ಎಂದು ಅಳತೆ ಮಾಡಿಸಲು ಬಂದಿದ್ದಾರೆ. ಇದರಿಂದ ಕೃಷಿ ಇಲಾಖೆಯವರು ಹಿಂದುಳಿದ ಜನಾಂಗದವರನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಕಡುಬಡವರಾದ ನಮಗೆ ಈ ಜಮೀನು ಬಿಟ್ಟರೆ ಬೇರೆ ಜಮೀನು ಇಲ್ಲ. ಆದ್ದರಿಂದ ಕೃಷಿ ಇಲಾಖೆ ದಲಿತರು ಮಾಡುತ್ತಿರುವ ಸಾಗುವಳಿ ಜಮೀನಿಗೆ ತಕರಾರು ಮಾಡದಂತೆ ಆದೇಶ ನೀಡಬೇಕು.
 
ಹಾಗೆಯೇ, ಗೋಮಾಳದಲ್ಲಿ 5ರಿಂದ 10 ಎಕರೆ ಜಮೀನನ್ನು ಮೇಲ್ವರ್ಗದ ಜನರು ಸಾಗುವಳಿ ಮಾಡುತ್ತಿದ್ದು, ಇದನ್ನು ರದ್ದುಪಡಿಸಿ ಭೂಹೀನರಾದ ಬಡವರಿಗೆ ಹಂಚಬೇಕೆಂದು ಈ ಹೋರಾಟ ನಡೆಸಲಾಗುತ್ತಿದೆ ಎಂದು ತಾಲ್ಲೂಕು ದಸಂಸ ಸಂಚಾಲಕ ಎ.ಕೆ. ಜಯಪ್ಪ ತಿಳಿಸಿದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರ ಹಾಗೂ ಕೃಷಿ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ ತಹಶೀಲ್ದಾರ್ ಕಚೇರಿಗೆ ಬಂದು ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಮುಖಂಡರಾದ ದೇವೇಂದ್ರಪ್ಪ, ಕೃಷ್ಣಪ್ಪ, ಮಂಜುನಾಥ್, ಶ್ರೀನಿವಾಸ್, ಜಯಪ್ಪ ಹಾಗೂ ಬೆಳಲಗೆರೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.