ADVERTISEMENT

‘ಸಂವಿಧಾನ ದೇಶದ ಆತ್ಮವಿದ್ದಂತೆ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 6:16 IST
Last Updated 30 ನವೆಂಬರ್ 2017, 6:16 IST

ಜಗಳೂರು: ಜಗತ್ತಿನಲ್ಲೇ  ಶ್ರೇಷ್ಟವಾದ ನಮ್ಮ ಸಂವಿಧಾನದ ಆಶಯದಂತೆ ಶೋಷಣೆರಹಿತ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಇಲ್ಲಿನ ಮುನ್ಸೀಫ್‌ ನ್ಯಾಯಾಧೀಶ ಎಂ.ಮಹೇಂದ್ರ ಅಭಿಪ್ರಾಯಪಟ್ಟರು.

ಕಾನೂನು ಸೇವಾ ಸಮಿತಿಯಿಂದ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ‘ಭಾರತ ಸಂವಿಧಾನ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ದೇಶದ ಆತ್ಮವಿದ್ದಂತೆ. ದೇಶದ ಸ್ವಾತಂತ್ರ್ಯ ಪಡೆದ ನಂತರ ಅಂಬೇಡ್ಕರ್‌ ಅವರ ಪರಿಶ್ರಮದಿಂದ ರೂಪುಗೊಂಡ ಭಾರತದ ಸಂವಿಧಾನ ಸಮಾಜದಲ್ಲಿನ ಸಮಸ್ತವನ್ನೂ ಒಳಗೊಂಡಿದೆ ಎಂದರು.

ADVERTISEMENT

ಕಳೆದ ಏಳು ದಶಕಗಳಿಂದ ಸಂವಿಧಾನದ ಮಾರ್ಗದರ್ಶನದಲ್ಲಿ ನಮ್ಮ ದೇಶ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಹಿಳೆಯರು ಮತ್ತು ಶೋಷಿತರ ಪರ ಸಾಕಷ್ಟು ಕಾನೂನುಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜಾರಿಯಾಗಿವೆ ಎಂದು ನ್ಯಾಯಾಧೀಶರು ಹೇಳಿದರು.

ವಕೀಲರಾದ ವೈ.ಹನುಮಂತಪ್ಪ ಮಾತನಾಡಿ, ಜಗತ್ತಿನಲ್ಲೇ ಅತ್ಯುತ್ತಮ ಹಾಗೂ ಜನಪರವಾದ ಭಾರತ ಸಂವಿಧಾನದ ಬಗ್ಗೆ ಕೆಲವು ಧಾರ್ಮಿಕ ವ್ಯಕ್ತಿಗಳು ಅಪಸ್ವರ ಎತ್ತುತ್ತಿರುವುದು ವಿಷಾದಕರ. ಸಂವಿಧಾನದ ಮೂಲ ಸ್ವರೂಪವನ್ನೇ ಬದಲಿಸುವ ಬಗ್ಗೆ ಮಾತನಾಡುವುದು ವಿಪರ್ಯಾಸ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಕೀಲರಾದ ಡಿ.ಶ್ರೀನಿವಾಸ್‌, ಎಚ್‌.ಎಂ.ಕರಿಬಸಯ್ಯ, ಸಣ್ಣೋಬಯ್ಯ, ಇ.ನಾಗಪ್ಪ, ಎಚ್‌.ಹನುಮಂತಪ್ಪ, ಬಿಸಿಎಂ ಇಲಾಖೆಯ ವೆಂಕಟೇಶ್ ಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.