ADVERTISEMENT

ಸಮಾವೇಶಕ್ಕೆ ಬಸ್; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 7:05 IST
Last Updated 21 ಫೆಬ್ರುವರಿ 2011, 7:05 IST

ದಾವಣಗೆರೆ: ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ಒಂದು ಸಾವಿರ ದಿನದ ಸಂಭ್ರಮಾಚರಣೆ, ಮತಗಟ್ಟೆ ಕಾರ್ಯಕರ್ತರ ಬೃಹತ್ ಸಮಾವೇಶಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಸಕಾಲಕ್ಕೆ ಬಸ್‌ಗಳು ಬಾರದೆ ಪ್ರಯಾಣಿಕರು ಪರದಾಡುವಂತಾಯಿತು.

ಹೊನ್ನಾಳಿಯಿಂದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗಕ್ಕೆ ತೆರಳುವ ಪ್ರಯಾಣಿಕರಿಗೆ ಸಕಾಲಕ್ಕೆ ಬಸ್ ಸಿಗಲಿಲ್ಲ. ಕೆಲವರು ಸಿಕ್ಕ ಆಟೋ, ಟೆಂಪೋಗಳಲ್ಲಿ ಪ್ರಯಾಣಿಸಿದರು. ಮೈಲಾರ ಜಾತ್ರೆಯ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಓಡಿಸಿತ್ತು. ದಾವಣಗೆರೆ, ಹುಬ್ಬಳ್ಳಿ, ಬಳ್ಳಾರಿ ಕಡೆಗಳಿಂದಲೂ ಬಸ್‌ಗಳು ಸಮಾವೇಶಕ್ಕೆ ತೆರಳಿದ್ದವು. ನಗರವನ್ನು ಹಾದು ಹೋಗುವ ಅವುಗಳ ನಿತ್ಯ ಸಂಚಾರ ತಪ್ಪಿದ್ದರಿಂದಲೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಇತ್ತ ಖಾಸಗಿ ಬಸ್‌ಗಳೂ ಸಮಾವೇಶಕ್ಕೆ ತೆರಳಿದ್ದವು. ಪರಿಣಾಮವಾಗಿ ಬೆಂಗಳೂರು ಕಡೆಗೆ ಹೋಗುವವರು ರೈಲುಗಳಲ್ಲಿ ಪ್ರಯಾಣಿಸಿದ್ದರಿಂದ ದಟ್ಟಣೆ ಹೆಚ್ಚಾಗಿತ್ತು.
ಸಮಾವೇಶಕ್ಕೆ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ 140 ಬಸ್ ಓಡಿಸಲಾಗಿದೆ. ಸಾಕಷ್ಟು ಪ್ರಮಾಣದ ಬಸ್ ಲಭ್ಯ ಇವೆ. ಆದ್ದರಿಂದ ಸ್ಥಳೀಯ ಓಡಾಟಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ಸಂಸ್ಥೆಯ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಮೃತ್ಯುಂಜಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಾವೇಶಕ್ಕೆ 50 ಖಾಸಗಿ ಬಸ್‌ಗಳು ಹೋಗಿವೆ. ಆದರೆ, ಬಹುತೇಕವು ಪ್ರವಾಸಿ ಬಸ್‌ಗಳಾಗಿದ್ದರಿಂದ ಜಿಲ್ಲೆಯ ಖಾಸಗಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ ಎಂದು ಖಾಸಗಿ ಬಸ್ ಮಾಲೀಕ ಜೆ. ಪ್ರಭಾಕರ್ ತಿಳಿಸಿದರು.

ಹೊನ್ನಾಳಿ: ಪಟ್ಟಣದಿಂದ ಶಿವಮೊಗ್ಗ, ಹರಿಹರ, ದಾವಣಗೆರೆ, ಹಿರೇಕೆರೂರ, ಶಿಕಾರಿಪುರ ಮತ್ತಿತರ ಊರುಗಳಿಗೆ ತೆರಳುವ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡಬೇಕಾಯಿತು. ಹಲವಾರು ಮದುವೆ, ಗೃಹಪ್ರವೇಶ ಇತರ ಶುಭ ಕಾರ್ಯಗಳಿಗಾಗಿ ಬೇರೆಬೇರೆ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಬಸ್‌ಗಳಿಲ್ಲದೇ ತೀವ್ರ ತೊಂದರೆ ಅನುಭವಿಸಿದರು.

ಪರಿಸ್ಥಿತಿಯ ಲಾಭ ಪಡೆದ ತ್ರಿಚಕ್ರ ಆಟೋರಿಕ್ಷಾ ಚಾಲಕರು ಹಲವಾರು ಮಾರ್ಗಗಳಲ್ಲಿ ಸಂಚರಿಸಿದರು. ಖಾಸಗಿ ಬಸ್ ಏಜೆಂಟ್‌ಗಳಾದ ಹಾಲೇಶಪ್ಪ, ಶ್ಯಾಮ್, ಮಂಜಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಬಸ್‌ಗಳ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಬೇರೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕಿತ್ತು ಎಂದರು.
ಪ್ರಯಾಣಿಕರಾದ ದಾವಣಗೆರೆಯ ಮಂಜುನಾಥ್  ಮಾತನಾಡಿ, ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳುತ್ತಾರೆ, ಜನತೆಯ ಬಗ್ಗೆ ಗಮನಹರಿಸುವುದಿಲ್ಲ, ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಬಸ್ ಭಾನುವಾರ ಕೇವಲ ಒಂದೇ ಸಂಚರಿಸಿದೆ. ಪ್ರತಿದಿನ ಅರ್ಧ ಗಂಟೆಗೊಂದರಂತೆ ಇವು ಸಂಚರಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.