ADVERTISEMENT

ಸಿದ್ದಲಿಂಗೇಶ್ವರ ಶ್ರೀ `ವರ್ಷದ ವ್ಯಕ್ತಿ'

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2012, 9:48 IST
Last Updated 9 ಡಿಸೆಂಬರ್ 2012, 9:48 IST

ದಾವಣಗೆರೆ: ಜಿಲ್ಲೆ ಸಮಾಚಾರ ದಿನಪತ್ರಿಕೆ ಬಳಗದ ವತಿಯಿಂದ 2012ನೇ ಸಾಲಿನ `ವರ್ಷದ ವ್ಯಕ್ತಿ' ಪ್ರಶಸ್ತಿಗೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದ್ದು, ಡಿ. 12ರಂದು ಮಧ್ಯಾಹ್ನ 3ಕ್ಕೆ ಗುಂಡಿಮಹಾದೇವ ಕಲ್ಯಾಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಬಳಗದ ಪ್ರಧಾನ ಕಾರ್ಯದರ್ಶಿ ಸಿ.ಕೆ. ಆನಂದತೀರ್ಥಾಚಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಾ.ಎಚ್. ಗಿರಿಜಮ್ಮ (ಸಾಹಿತ್ಯ), ಅಣಬೇರು ರಾಜಣ್ಣ( ಉದ್ಯಮ), ಎಚ್.ಕೆ. ರಾಮಚಂದ್ರಪ್ಪ (ಕಾರ್ಮಿಕ), ಎಚ್. ಮಹಾಬಲೇಶ್ವರ (ಮಾನವೀಯ ಸೇವೆ), ಪಿ.ವಿ. ಗಂಗಯ್ಯ (ಸರ್ಕಾರಿ ಸೇವೆ), ಎಂ. ಮಹೇಶ್ವರಯ್ಯ (ಕ್ರೀಡೆ), ಎನ್. ಮೇಘರಾಜನ್ (ವೈದ್ಯಕೀಯ), ಅಜೀಂಸಾಬ್ (ಅಂಚೆ ಇಲಾಖೆ), ವೆಂಕಟರಾಮಾಂಜನೇಯ (ಪ್ರಗತಿಪರ ರೈತ), ಎಂ.ಎಸ್. ಶಿವಶರಣಪ್ಪ (ಪತ್ರಿಕೋದ್ಯಮ), ಜಿ.ಟಿ. ತಿಪ್ಪೇಸ್ವಾಮಿ (ಶಿಕ್ಷಣ), ಅಬ್ದುಲ್ ಅಜೀಜ್ (ಪೊಲೀಸ್ ಇಲಾಖೆ) ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಇದರ ಜತೆಗೆ `ಭಾರತೀಯ ಸಿನಿಮಾರಂಗಕ್ಕೆ ಶತಮಾನ ಸಂಭ್ರಮ' ವಿಚಾರ ಸಂಕಿರಣ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ಮಾಪಕ ಡಾ.ಬಿ.ಎಸ್. ನಾಗಪ್ರಕಾಶ್ ವಿಚಾರ ಸಂಕಿರಣ ಉದ್ಘಾಟಿಸುವರು. ಹಿರಿಯ ನಿರ್ಮಾಪಕ ಸಿ.ವಿ. ಶಿವಶಂಕರ್ ಮತ್ತು ಹಿರಿಯ ಕಲಾವಿದೆ ಆರ್.ಟಿ. ರಮಾ ಅಧ್ಯಕ್ಷತೆ ವಹಿಸಲಿದ್ದಾರೆ.

ಡಾ.ಎಚ್. ಗುರಿಜಮ್ಮ ಉಪನ್ಯಾಸ ನೀಡಲಿದ್ದಾರೆ. ಪತ್ರಕರ್ತ ಗಣೇಶ್ ಕಾಸರಗೋಡು, ನಿರ್ದೇಶಕ ಎಚ್.ಎಸ್. ಶಿವರುದ್ರಪ್ಪ ಭಾಗವಹಿಸುವರು.

ಸಂಜೆ 6ಕ್ಕೆ ನಡೆಯುವ `ವರ್ಷದ ವ್ಯಕ್ತಿ' ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸಮಾರಂಭ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಬಳಗದ ಸಂಚಾಲಕ ಗಣೇಶ್ ಶೆಣೈ, ಸದಸ್ಯ ನಾಗಭೂಷಣ ತೌಡೂರು, ವಿ. ಹನುಮಂತಪ್ಪ, ಬಿ.ಜೆ. ಅನಂತಪದ್ಮನಾಭ ರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.