ADVERTISEMENT

ಹೀಗೊಂದು ವಿಶೇಷ ಗಣಪತಿ ಉತ್ಸವ

ಸುರೇಶ ರಾಜೇನವರ
Published 8 ಸೆಪ್ಟೆಂಬರ್ 2011, 11:15 IST
Last Updated 8 ಸೆಪ್ಟೆಂಬರ್ 2011, 11:15 IST

ಹರಿಹರ: ಸಾರ್ವಜನಿಕರನ್ನು ಆಕರ್ಷಿಸಲು ನೃತ್ಯ ಕಾರಂಜಿ, ಪ್ರಸಾದ ನೀಡುವ ಗಣಪತಿ, ತೀರ್ಥ ನೀಡುವ ಗಣಪತಿ, ಸ್ವಯಂಚಾಲಿತವಾಗಿ ಬಾಗಿಲು ತೆಗೆದು ದರ್ಶನ ನೀಡುವ ಗಣಪತಿ ಅನೇಕ ರೀತಿ ತಂತ್ರಗಳನ್ನು ಬಳಸಿ ಸೆಳೆಯುವುದು ವಾಡಿಕೆ. ಆದರೆ, ಇಲ್ಲೊಂದು ಯುವಕ ಸಂಘ ಭಾರತೀಯ ಸನಾತನ ಸಂಸ್ಕೃತಿ, ಆಚರಣೆ, ಪೂಜಾ ಪದ್ಧತಿ, ಸ್ನಾನ ಹಾಗೂ ಊಟದ ಕ್ರಮ ಮತ್ತಿತರ ಇನ್ನೂ ಅನೇಕ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಿ ಇತರರಿಗೆ ಮಾದರಿಯಾಗಿದೆ.

ಕೇವಲ ಮನೆಗಳಿಗೆ ಸೀಮಿತವಾಗಿದ್ದ ಗಣಪತಿ ಹಬ್ಬ ನಾಡಿನ ಹಬ್ಬವಾಗಿ ಪರಿವರ್ತನೆಗೊಂಡು ದಶಕಗಳು ಉರುಳಿವೆ. ಪ್ರತಿ ಗಲ್ಲಿ-ಗಲ್ಲಿಗಳಲ್ಲೂ ಗಣಪತಿ ಉತ್ಸವ ನಡೆಯುತ್ತಿದೆ. ನಾಡಿನ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಬಿಂಬಸಬೇಕಾದ ಗಣೇಶ ಉತ್ಸವದ ಪೆಂಡಾಲಿನಲ್ಲಿ ಭಕ್ತಿ-ಭಾವ ಗೀತೆಗಳಿಂತ ಹೆಚ್ಚಾಗಿ ಅಸಂಬದ್ಧ, ದ್ವಂದ್ವಾರ್ಥ ನೀಡುವ ಚಲನಚಿತ್ರ ಗೀತೆಗಳು ಹೊರಹೊಮ್ಮುತ್ತಿರುವುದು ಸಾಮಾನ್ಯ ಎನ್ನುವಂತಾಗಿದೆ.

ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿಗೆ ಹಿಡಿದ ಕನ್ನಡಿಯಂತೆ. ನಮ್ಮ ಅವ್ಯಕ್ತ ಭಾವನೆಗಳು, ಸಮಾಜಮುಖಿ ಚಿಂತನೆಗಳು ಹಬ್ಬದಲ್ಲಿ ಬಿಂಬಿತವಾಗಬೇಕು ಜತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಬೇಕು ಎನ್ನುವ ಚಿಂತನೆ ನಡೆಸಿದ ನಡವಲಪೇಟೆ ಯುವಕ ಸಂಘದ ಸದಸ್ಯರು ವಿಶಿಷ್ಟವಾಗಿ ಹನ್ನೊಂದು ದಿನಗಳ ಕಾಲ ಹಬ್ಬ ಆಚರಿಸುತ್ತಿದ್ದಾರೆ.
 
ಸೆ. 7ರಂದು ನಾಮದೇವ ಶಿಂಪಿ ಕಲ್ಯಾಣ ಮಂಟಪದಲ್ಲಿ ಉಚಿತ ಮೂಳೆ ಸಾಂಧ್ರತೆ ಹಾಗೂ ಮಧುಮೇಹ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದು ಸಂಘದ ಸಮಾಜಮುಖಿ ಚಿಂತನೆಗೆ ಕೈಗನ್ನಡಿಯಾಗಿದೆ.

ಅತ್ಯಂತ ಸರಳವಾಗಿ, ಕಡಿಮೆ ಖರ್ಚಿನಲ್ಲಿ ಪೆಂಡಾಲ್ ನಿರ್ಮಿಸಿದ್ದಾರೆ. ಪ್ರವೇಶದ್ವಾರದಿಂದ ಗಣಪತಿ ವೀಕ್ಷಿಸುವ ಸ್ಥಳದವರೆಗೆ ಸಾಲಾಗಿ, ಸ್ನಾನ ಮಾಡುವ ಪದ್ಧತಿ, ಗಣೇಶ ಪೂಜೆಯ ಉದ್ದೇಶ, ವಿಧಾನ, ಪದ್ಧತಿ, ಕುಂಕುಮ ಅಥವಾ ಗಂಧ ಧರಿಸುವ ಕಾರಣ ಹಾಗೂ ಪದ್ಧತಿ, ಪೂಜೆಗೆ ಬಳಸುವ ಹೂಗಳು, ನೈವೇದ್ಯೆ ಅರ್ಪಿಸುವ, ತೀರ್ಥ, ಪ್ರಸಾದ ಸ್ವೀಕರಿಸುವ ಪದ್ಧತಿ ತಿಳಿಸುವ ಚಿತ್ರಸಹಿತ ನಾಮಫಲಕಗಳನ್ನು ಲಗತ್ತಿಸಿದ್ದಾರೆ.

ಇದಷ್ಟೇ ಅಲ್ಲದೇ ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಸುವ ಆಚರಣೆಗಳ ಅರ್ಥ ಹಾಗೂ ಅದಕ್ಕಿರುವ ಕಾರಣಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ವಿವರಣಾ ಫಲಕಗಳನ್ನು ನೋಡಿದವರು ಒಂದು ಕ್ಷಣವಾದರೂ ಅದರಲ್ಲಿ ಬರೆದಿರುವ ವಿವರಣೆಗಳತ್ತ ಕಣ್ಣು ಹಾಯಿಸಿದೆ ಇರಲು ಸಾಧ್ಯವಿಲ್ಲ.

ವಿನೂತನವಾಗಿ ಗಣಪತಿ ಉತ್ಸವ ಆಚರಿಸುತ್ತಿರುವ ಸಂಘದ ಸಂಚಾಲಕ ಮೋಹನ್ ದುರುಗೋಜಿ, ಇತ್ತೀಚೆಗೆ ನಡೆಯುತ್ತಿರುವ ಗಣಪತಿ ಉತ್ಸವಗಳು ಸಂಸ್ಕೃತಿಗೆ ಪೂರಕವಾಗಿ ನಡೆಯುತ್ತಿಲ್ಲ. ನಮ್ಮ ಧರ್ಮವನ್ನು ನಾವೇ ಗೌರವಿಸದಿದ್ದರೆ ಇತರರಿಂದ ಗೌರವ ನಿರೀಕ್ಷಿಸುವುದು ಸಾಧ್ಯವಿಲ್ಲ. ಉತ್ಸವ ಅತ್ಯಂತ ಸರಳವಾಗಿರಬೇಕು. ಉತ್ಸವದ ಆಂತರ್ಯ ಹಾಗೂ ಆಚರಣೆಯ ರೀತಿ-ನೀತಿಗಳನ್ನು ಬಿಂಬಿಸಿಬೇಕು.
 
ನಾವು ಆಚರಿಸುವ ಪದ್ಧತಿಯನ್ನೇ ನಮ್ಮ ಮುಂದಿನ ಪೀಳಿಗೆಯವರೂ ಅನುಸರಿಸುತ್ತಾರೆ ಎಂಬುದನ್ನು ಮರೆಯಬಾರದು. ಕಳೆದ ವರ್ಷದಿಂದ ಭಾರಿ ಧ್ವನಿವರ್ಧಕ ಬಳಕೆ ನಿಲ್ಲಿಸಿದ್ದೇವೆ. ಆಡಂಬರ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದೇವೆ. ಭಾವ-ಭಕ್ತಿಗೀತೆಗೆ ಹೆಚ್ಚಿನ ಪ್ರಾಧಾನ್ಯತೆ.

ವಿಸರ್ಜನೆ ಸಂದರ್ಭದಲ್ಲಿ ಮಹಿಳೆಯರು ಹಾಗೂ ಮಕ್ಕಳು ಆರತಿ ತಟ್ಟೆಗಳೊಂದಿಗೆ ಭಾಗವಹಿಸಿದ್ದು ಹೆಮ್ಮೆಯ ವಿಷಯ. ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಳ್ಳುವಂತಹ ವಾತಾವರಣ ಸೃಷ್ಟಿಯಾದರೆ, ಉತ್ಸವ ಸಾರ್ಥಕವಾದಂತೆ ಎನ್ನುತ್ತಾರೆ.

ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಭಾರಿ ಧ್ವನಿವರ್ಧಕ, ದ್ವಂದ್ವಾರ್ಥದ ಹಾಡುಗಳು, ಅಮಲಿನ ಕುಣಿತ ಎಲ್ಲವೂ ಕೊನೆಗೊಂಡು ಸಂಪ್ರದಾಯ ಬಿಂಬಿಸುವ ಭಕ್ತಿಭಾವ ಮೂಡಿಸುವ ಆಚರಣೆಗಳು ಆರಂಭವಾಗಲಿ ಎಂಬುದು ಸಾರ್ವಜನಿಕರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.