ADVERTISEMENT

ಹೊನ್ನಾಳಿ ಫಸ್ಟ್‌, ದಾವಣಗೆರೆ ಉತ್ತರ ಲಾಸ್ಟ್‌

ಸುಶಿಕ್ಷಿತರ ಕ್ಷೇತ್ರದಲ್ಲಿ ಕಡಿಮೆ ಮತದಾನ; ಪಿಂಕ್‌ ಮತಗಟ್ಟೆ ಸ್ಥಾಪನೆಗೆ ನಾರಿಯರ ಮೆಚ್ಚುಗೆ

ಬಾಲಚಂದ್ರ ಎಚ್.
Published 14 ಮೇ 2018, 6:51 IST
Last Updated 14 ಮೇ 2018, 6:51 IST
ಹೊನ್ನಾಳಿ ಫಸ್ಟ್‌, ದಾವಣಗೆರೆ ಉತ್ತರ ಲಾಸ್ಟ್‌
ಹೊನ್ನಾಳಿ ಫಸ್ಟ್‌, ದಾವಣಗೆರೆ ಉತ್ತರ ಲಾಸ್ಟ್‌   

ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ 75.96ರಷ್ಟು ಮತದಾನ‌ವಾಗಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 16,33,405 ಮಂದಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ 12,40,779 ಮತದಾರರು ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.

ಪುರುಷರೇ ಹೆಚ್ಚು: ಜಿಲ್ಲೆಯಲ್ಲಿ 8,24,774 ಪುರುಷ ಮತದಾರರಿದ್ದು, ಅವರಲ್ಲಿ 6,36,820 ಮಂದಿ ಮತ ಹಾಕಿದ್ದಾರೆ. ಇನ್ನು 8,08,058 ಮಹಿಳಾ ಮತದಾರರಿದ್ದು, ಅವರಲ್ಲಿ 6,03,953 ಹಕ್ಕು ಚಲಾಯಿಸಿದ್ದಾರೆ.

ಮತ ಹಾಕಿದ 6 ಲೈಂಗಿಕ ಅಲ್ಪಸಂಖ್ಯಾತರು: ಜಗಳೂರು –10, ಹರಪನಹಳ್ಳಿ–17, ಹರಿಹರ–5, ದಾವಣಗೆರೆ ಉತ್ತರ–33, ದಾವಣಗೆರೆ ದಕ್ಷಿಣ–36, ಮಾಯಕೊಂಡ–3, ಚನ್ನಗಿರಿ–9, ಹೊನ್ನಾಳಿ–4 ಸೇರಿ ಜಿಲ್ಲೆಯಲ್ಲಿ 117 ಲೈಂಗಿಕ ಅಲಸ್ಪಂಖ್ಯಾತರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, ಮತ ಚಲಾಯಿಸಿದ್ದು ಕೇವಲ
6 ಮಂದಿ.

ADVERTISEMENT

ಹೊನ್ನಾಳಿಯಲ್ಲಿ ಹೆಚ್ಚು: 2013ರ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶೇ 85.45 ಪ್ರಮಾಣದ ಮತದಾನವಾಗಿತ್ತು. ಈ ಬಾರಿಯೂ ಅದು ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದು, ಶೇ 82.93ರಷ್ಟು ಮತದಾನವಾಗಿದೆ. ಕಳೆದ ಬಾರಿ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶೇ 64.64 ಮತದಾನವಾಗಿತ್ತು. ಜಿಲ್ಲೆಯಲ್ಲಿಯೇ ಇದು ಅತಿ ಕಡಿಮೆ ಪ್ರಮಾಣ. ಈ ಬಾರಿಯೂ ದಾವಣಗೆರೆ ಉತ್ತರ ಕೊನೆಯ ಸ್ಥಾನದಲ್ಲಿದ್ದು, ಶೇ 64.84ರಷ್ಟಿದೆ. ಸುಶಿಕ್ಷಿತರೇ ಹೆಚ್ಚಾಗಿರುವ ಉತ್ತರ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಇಳಿಮುಖವಾಗಿರುವುದು ವಿಶೇಷ.

ಕಳೆದ ಚುನಾವಣೆಯ ಅಂಕಿ ಅಂಶಗಳನ್ನು ನೋಡುವುದಾದರೆ, ಮಾಯಕೊಂಡ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಶೇ 3.62ರಷ್ಟು ಹೆಚ್ಚಾಗಿದೆ. ಕಳೆದ ಸಲ ಶೇ 77.66 ರಷ್ಟಿತ್ತು. ಈ ಬಾರಿ ಶೇ 80.81ಕ್ಕೆ ಏರಿಕೆಯಾಗಿದೆ. ಉಳಿದಂತೆ ಹೊನ್ನಾಳಿ, ಚನ್ನಗಿರಿ, ದಾವಣಗೆರೆ ದಕ್ಷಿಣ, ಜಗಳೂರು, ಹರಿಹರ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಅಲ್ಪ ಇಳಿಕೆಯಾಗಿದೆ. ಹರಪನಹಳ್ಳಿ, ದಾವಣಗೆರೆ ಉತ್ತರದಲ್ಲಿ ಅಲ್ಪ ಏರಿಕೆಯಾಗಿದೆ.

ಪಿಂಕ್‌ ಮತಗಟ್ಟೆಗೆ ಸ್ಪಂದನೆ: ಮಹಿಳಾ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಚುನಾವಣಾ ಆಯೋಗ ಈ ಬಾರಿ ಜಿಲ್ಲೆಯಲ್ಲಿ 15 ಪಿಂಕ್‌ ಮತಗಟ್ಟೆಗಳನ್ನು ಸ್ಥಾಪಿಸಿತ್ತು. ಮಹಿಳಾ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಚನ್ನಗಿರಿ ತಾಲ್ಲೂಕಿನ ಪಿಂಕ್‌ ಮತಗಟ್ಟೆಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾನವಾಗಿದೆ.

ಮಾಯಕೊಂಡ ಮತಗಟ್ಟೆಯಲ್ಲಿ 535 ಮಹಿಳೆಯರು ಮತ ಹಾಕಿದ್ದಾರೆ. ದಾವಣಗೆರೆಯ ಲೂರ್ಡ್ಸ್‌ ಶಾಲೆಯಲ್ಲಿ 179 (ಶೇ 54.6) ನಾರಿಯರು ಹಕ್ಕು ಚಲಾಯಿಸಿದ್ದಾರೆ.

ಸೇಂಟ್‌ ಪಾಲ್‌ ಮತಗಟ್ಟೆಯಲ್ಲಿ 223, ಎಪಿಎಂಸಿ ಕಚೇರಿ ಮತಗಟ್ಟೆಯಲ್ಲಿ 354 (ಶೇ78.2), ಶಾಮನೂರು 428 (ಶೇ 80.35), ಡಾನ್ ಬಾಸ್ಕೊ 299 (ಶೇ 56), ಡಾನ್‌ ಬಾಸ್ಕೊ–2ರಲ್ಲಿ 272 (ಶೇ 62), ಮಿಲ್ಲತ್ ಶಾಲೆ 495 (ಶೇ 67.9), ಡಿಆರ್‌ಆರ್‌ ಶಾಲೆ 291 (ಶೇ 64.4), ಹರಿಹರ 300 (ಶೇ 60.4), ಜಗಳೂರು 274 (ಶೇ 63.9), ಉಚ್ಚಂಗಿದುರ್ಗ 288 (ಶೇ 86.9), ಹರಪನಹಳ್ಳಿ 312 (ಶೇ 51.54), ಚನ್ನಗಿರಿ 441 (ಶೇ 88.7) ಹೊನ್ನಾಳಿಯ ಪಿಂಕ್ ಮತಗಟ್ಟೆಯಲ್ಲಿ 374 (ಶೇ 63.4) ಮಹಿಳೆಯರು ಮತ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.