ದಾವಣಗೆರೆ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಗುರುವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಬಗ್ಗೆ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುವಾರ ಶುಭದಿನ ಎಂದು ಪರಿಗಣಿಸಿ ಪಕ್ಷದ ಬಿ–ಫಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಇದೇ 26ರಂದು ಮೆರವಣಿಗೆ ಮೂಲಕ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆಗೆ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಗೆ
ಗೆಲುವು ಖಚಿತ. 10 ವರ್ಷದಿಂದ ಹಳ್ಳಿಹಳ್ಳಿಗೆ
ಸುತ್ತಿ ಕೆಲಸ ಮಾಡಿದ್ದೇನೆ. ಸಾಕಷ್ಟು ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ. ನನ್ನ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಸಹಕಾರಿ
ಆಗಲಿವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರು, ಹಿಂದುಳಿದ ವರ್ಗದ ಜನರು ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎಂದು ಬಯಸುತ್ತಿದ್ದಾರೆ. ಮೋದಿ ಅಲೆಯೇ ಸೃಷ್ಟಿಯಾಗಿದೆ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರೊಬ್ಬರ ನಿಮ್ಮ ಮೇಲೆ ಹಫ್ತಾ ವಸೂಲಿ ಆರೋಪ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಾಮಾಲೆ ಕಣ್ಣಿನ ಕಾಂಗ್ರೆಸ್‌ಗೆ ಎಲ್ಲವೂ ಹಳದಿಯಂತೆ ಕಾಣಿಸುತ್ತದೆ. ಹಫ್ತಾ ವಸೂಲಿ ಕಾಂಗ್ರೆಸ್ ಸಂಸ್ಕೃತಿ. ನಮ್ಮ ತಂದೆ ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ’ ಎಂದು ತಿರುಗೇಟು ನೀಡಿದರು.
ಪಕ್ಷದಲ್ಲಿ ಇರುವ ಗೊಂದಲದ ಬಗ್ಗೆ ಕೇಳಿದ ಪ್ರಶ್ನೆಗೆ ‘ನನಗೋಸ್ಕರ ಮಾಜಿ ಶಾಸಕರು ಸಹಿಸಿಕೊಂಡು ಕೆಲಸ ಮಾಡುತ್ತಾರೆ. ಟಿ. ಗುರುಸಿದ್ದನಗೌಡ ಜಗಳೂರು ಭಾಗದಲ್ಲಿ ಪ್ರಚಾರ ಮಾಡಿದ್ದಾರೆ; ಬಿ.ಪಿ.ಹರೀಶ್ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ
ಬಗ್ಗೆ ಯಾವುದೇ ಗೊಂದಲ ಬೇಡ’ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆ ವೇಳೆ ಮನೆಯೊಂದು ಮೂರು ಬಾಗಿಲು ಎಂಬ ಸ್ಥಿತಿಗೆ ಬಿಜೆಪಿ ತಲುಪಿತ್ತು. ಇದೀಗ ಬಿಜೆಪಿ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಗುರುತಿಸಿಕೊಂಡಿದ್ದ ಮುಖಂಡರೆಲ್ಲಾ ಒಂದಾಗಿದ್ದೇವೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಗೆಲುವು ಸುಲಭ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ನಿ ಗಾಯತ್ರಿ ಸಿದ್ದೇಶ್ವರ, ಸಹೋದರ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಘಟಕದ ಅಧ್ಯಕ್ಷ ಅಣಬೇರು ಜೀವನಮೂರ್ತಿ, ಎಚ್.ಎನ್.ಗುರುನಾಥ್, ವೀರೇಶ್, ಬಿ.ಎಂ.ಸತೀಶ್ ಮೊದಲಾದವರು ಹಾಜರಿದ್ದರು.
ಇಬ್ಬರಿಂದ ಮೂರು ನಾಮಪತ್ರ
ದಾವಣಗೆರೆ: ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಗುರುವಾರ ಇಬ್ಬರು ಅಭ್ಯರ್ಥಿಗಳು ಮೂರು ನಾಮಪತ್ರ ಸಲ್ಲಿಸಿದರು. ವಿವರ ಈ ಕೆಳಕಂಡಂತೆ ಇದೆ.
ಸಂಖ್ಯೆ ಅಭ್ಯರ್ಥಿ ಪಕ್ಷ
1. ಜಿ.ಎಂ.ಸಿದ್ದೇಶ್ವರ ಬಿಜೆಪಿ
2. ಸುಬಾನ್ ಖಾನ್ ಪಕ್ಷೇತರ
3. ಸುಬಾನ್ ಖಾನ್ ಎಎಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.